ಕೃವಿವಿ ನೇಮಕಾತಿ ತಡೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 17
ಕೇಂದ್ರ ಸರ್ಕಾರ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂವಿಧಾನದ ಕಲಂ 371(ಜೆ)ನೇ ವಿಧಿಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಕಲಂ ಜಾರಿಗೆ ಬರುವವರೆಗೆ ನೇಮಕಾತಿ ನಡೆಸದಂತೆ ಆಗ್ರಹಿಸಿ ಹೈ- ಕ ಹೋರಾಟ ಸಮಿತಿ ಕಾರ್ಯಕರ್ತರು ಶುಕ್ರವಾರ ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ತೆರಳಿ ವಿರೋಧ ವ್ಯಕ್ತಪಡಿಸಿದರು.
ಈ ಕುರಿತು ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಅವರಿಗೆ ದೂರು ಸಲ್ಲಿಸಿ, 371ನೇ ಕಲಂ(ಜೆ) ಅಡಿ ಹಿಂದುಳಿದ ಹೈ-ಕ ಭಾಗದ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ವಿಶೇಷ ಮೀಸಲಾತಿ ಲಭ್ಯವಾಗಲಿದೆ. ಆದರೆ ಕೃಷಿ ವಿವಿಯು ವಿಶೇಷ ಸ್ಥಾನಮಾನ ಜಾರಿಯಾಗುವ ಮೊದಲೇ ನೇಮಕಾತಿಗೆ ಮುಂದಾಗಿರುವುದರಿಂದ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ಸಂದರ್ಶನಕ್ಕೆ ಚಿಂತನೆ ಸರಿಯಲ್ಲ: ಹೈ.ಕ. ಭಾಗದವರಿಗೆ ವಿಶೇಷ ಸ್ಥಾನಮಾನ ದೊರೆಯುವವರೆಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಗೆ ಈಗಾಗಲೇ ಹೋರಾಟದ ಫಲವಾಗಿ ತಡೆಯೊಡ್ಡಲಾಗಿದೆ. ಆದರೆ ರಾಯಚೂರು ಕೃಷಿ ವಿವಿ ಆಡಳಿತವು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವ ಉದ್ದೇಶದಿಂದ ಅಧಿಸೂಚನೆ ಹೊರಡಿಸಿ ಸಂದರ್ಶನ ನಡೆಸಲು ಚಿಂತನೆ ನಡೆಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಹೈ-ಕ ಭಾಗದಲ್ಲಿ 371ನೇ ಕಲಂ ಜಾರಿಯಾಗುವವರೆಗೆ ನೇಮಕಾತಿ ನಡೆಸದಂತೆ ಸೂಚಿಸಿದ್ದರೂ ಕೃಷಿ ವಿವಿ ಆಡಳಿತವು ನೇಮಕಾತಿಗೆ ಮುಂದಾಗಿರುವ ಕ್ರಮವನ್ನು ಖಂಡಿಸಿದ ಹೋರಾಟಗಾರರು, ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವ ವರ್ತನೆ ಸರಿಯಲ್ಲ ಎಂದು ಟೀಕಿಸಿದರು.
ನೇಮಕಾತಿ ಪ್ರಕ್ರಿಯೆಗೆ ತಡೆ: ಈ ಹಿನ್ನೆಲೆಯಲ್ಲಿ ಕೃಷಿ ವಿವಿ ಆಡಳಿತವು ಕೂಡಲೇ ನಡೆಸಲು ಉದ್ದೇಶಿಸಿರುವ ವಿವಿಧ ಹುದ್ದೆಗಳ ಸಂದರ್ಶನ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಅವರು ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿ, ಕೃಷಿ ವಿವಿಯು ನಡೆಸಲು ಉದ್ದೇಶಿಸಿದ್ದ ಸಂದರ್ಶನ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ತಾವೂ ಹೈ-ಕ ಭಾಗದವರಾಗಿದ್ದು ಇಲ್ಲಿನ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ ಅರಿತಿರುವುದಾಗಿ ತಿಳಿಸಿದರು.
ಅದೇ ರೀತಿ ಕೃಷಿ ವಿವಿಗೆ ಮಂಜೂರಾಗಿದ್ದ 12ನೇ ಹಣಕಾಸು ಯೋಜನೆಯಡಿಯ ಅನುದಾನ ಸರ್ಕಾರಕ್ಕೆ ಮರಳುವ ಸಾಧ್ಯತೆ ಹೆಚ್ಚಾಗಿದ್ದರಿಂದ ವಿವಿಯಲ್ಲಿನ 'ಎ' ಮತ್ತು 'ಬಿ' ವರ್ಗಗಳ 40ರಿಂದ 45 ಹುದ್ದೆಗಳಿಗೆ ನೇಮಕಾತಿಗೆ ಯೋಜಿಸಲಾಗಿತ್ತು. ಆದರೆ ಸದ್ಯ ಸಂದರ್ಶನ ಸೇರಿದಂತೆ ಎಲ್ಲ ರೀತಿಯ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವುದಾಗಿ ಭರವಸೆ ನೀಡಿದರು.
ಹೈ.ಕ. ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ ಡಾ. ವಿಕ್ರಮ್ ಪಾಟೀಲ್, ಡಾ. ರಜಾಕ್ ಉಸ್ತಾದ್, ಅಶೋಕ ಕುಮಾರ್ ಜೈನ್, ಖಾಜಾ ಅಸ್ಲಂ ಪಾಷಾ ಇದ್ದರು.