ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಬೇಸಿಗೆ ಶಿಬಿರ ಪೂರಕ: ಹಿರೇಮಠ
ಕನ್ನಡಪ್ರಭ ವಾರ್ತೆ ಸಿಂಧನೂರು ಮೇ 17
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಬುದ್ಧಿ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಅವಶ್ಯ ಎಂದು ಎಸ್ಡಿಎಂಟಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ಶರಣು ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಆದರ್ಶ ಕಾಲೋನಿಯ ಮೀನಾಕ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಗಾಲೋಟದಲ್ಲಿ ಓಡುತ್ತಿರುವ ಸ್ಪರ್ಧಾತ್ಮಕ ಯುಗದಲ್ಲಿ ಇಂದಿನ ಮಕ್ಕಳು ಎಷ್ಟು ಓದಿದರೂ ಕಡಿಮೆ. ತಮ್ಮ ತಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಬಾರದು ಎನ್ನುವುದು ಪ್ರತಿಯೊಬ್ಬ ಪಾಲಕರ ಆಶಯ. ಹಿಂದಿನ ಮಕ್ಕಳು ಆಟವಾಡಲು ಹೆಚ್ಚು ಗಮನ ಕೊಡುತ್ತಿದ್ದರು, ಆದರೆ ಈಗಿನ ಪೀಳಿಗೆ ಓದಿನ ಕಡೆ ಹೆಚ್ಚು ಗಮನ ಹರಿಸುತ್ತಿದ್ದನ್ನು ಕಾಣುತ್ತಿದ್ದೇವೆ ಎಂದರು.
ಮಕ್ಕಳಿಗೆ ನೈತಿಕ ಶಿಕ್ಷಣ ಅವಶ್ಯ: ಮಕ್ಕಳ ಬುದ್ಧಿ ಬೆಳವಣೆಗೆಯಲ್ಲಿ ಶಿಕ್ಷಕನ ಪಾತ್ರ ಪ್ರಮುಖ. ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿ ಕೊಳ್ಳುವಂತ ಶಿಕ್ಷಣವನ್ನು ಕೊಡುವುದರ ಜೊತೆಯಲ್ಲಿ ಪೂಜೆ, ಪ್ರಾರ್ಥನೆ ಎಂದರೇನು ಎನ್ನುವುದನ್ನು ತಿಳಿಸಿ ಕೊಡಬೇಕಿದೆ.
ಪೂಜೆ ಪ್ರಾರ್ಥನೆ ಎಂದರೆ ಗಂಟೆಗಟ್ಟಲೆ ಬಾಯಲ್ಲಿ ಮಂತ್ರ ಪಠಿಸುತ್ತಾ ಪೂಜೆ ಮಾಡುವುದಲ್ಲ, ಮಂತ್ರ ಜಪಿಸುವುದಕ್ಕಿಂತ ದುಡಿಯುವ ಕೈಗಳೇ ಹೆಚ್ಚು ಪವಿತ್ರ. ನಾನು ಚೆನ್ನಾಗಿ ಬದುಕಬೇಕು. ಜೊತೆಯಲ್ಲಿ ನನ್ನವರು ಚೆನ್ನಾಗಿ ಬದುಕಲಿ ಎನ್ನುವದನ್ನು ಮಕ್ಕಳಿಗೆ ಕಲಿಸುವಲ್ಲಿ ಶಿಕ್ಷಕನ ಪಾತ್ರ ಮುಖ್ಯವಾದುದು ಎಂದು ಸಲಹೆ ನೀಡಿದರು.
'ಮಾಯಾ ಪೆಟ್ಟಿಗೆ'ಯಿಂದ ದೂರವಿರಿ: ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಗುರುಪ್ರಸಾದ ಮಾತನಾಡಿ, ಶಾಲೆಯ ಅವಧಿ ಮುಗಿದ ಮೇಲೆ ಮಕ್ಕಳು ಬೇಸಿಗೆಯಲ್ಲಿ ಮಾಯಾ ಪೆಟ್ಟಿಗೆ ಟಿವಿಯನ್ನು ನೋಡುತ್ತಾ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಇಂತಹ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಬುದ್ಧಿ ಬೆಳವಣೆಗೆಯ ಜೊತೆಯಲ್ಲಿ ಒಬ್ಬರಿಂದೊಬ್ಬರಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದು ಹೇಳಿದರು.
ಮೀನಾಕ್ಷಿ ಪಬ್ಲಿಕ್ ಶಾಲೆ ಆಡಳಿತಾಧಿಕಾರಿ ಚಂದ್ರಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವರ್ಣಲತಾ ಹಾಗೂ ಶಿಕ್ಷಕಿಯ ವೃಂದದವರು ಮತ್ತು ಪಾಲಕರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.