ಮಾರುಕಟ್ಟೆ ರಸ್ತೆ ಸಂಚಾರ ಅಸ್ತವ್ಯಸ್ತ; ತೊಂದರೆ
ಕನ್ನಡಪ್ರಭ ವಾರ್ತೆ ಮುದಗಲ್ ಮೇ 17
ಜನಸಂಖ್ಯೆ ಹೆಚ್ಚಿದಂತೆ ಪಟ್ಟಣಕ್ಕೆ ಗ್ರಾಮೀಣ ಪ್ರದೇಶಗಳಿಂದ ಸಂತೆ ಮಾರುಟ್ಟೆಗೆ ಹೆಚ್ಚೆಚ್ಚು ಜನ ಆಗಮಿಸುತ್ತಿದ್ದು, ತರಕಾರಿ ಮಾರುಕಟ್ಟೆಗೆ ತರಳುವ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ.
ಖಾಸಗಿ ವಾಹನಗಳ ಓಡಾಟ, ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಟಂಟಂಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವುದು ಹಾಗೂ ಬಾಳೆ ಹಣ್ಣು, ತರಕಾರಿ ಸೇರಿದಂತೆ ಅನೇಕ ಸಣ್ಣಪುಟ್ಟ ವ್ಯಾಪಾರಸ್ಥರು ರಸ್ತೆಯಲ್ಲೇ ಬಂಡಿ ನಿಲ್ಲಿಸುತ್ತಿದ್ದರಿಂದ ಎದುರಿನಿಂದ ಒಂದು ವಾಹನ ಬಂದರೆ ಇನ್ನೊಂದು ವಾಹನ ಸಾಗಲು ಜಾಗ ಇರುವುದಿಲ್ಲ. ಇದರಿಂದ ವಾಹನ ಮತ್ತು ಪಾದಚಾರಿಗಳು ಅಲ್ಲಲ್ಲೇ ನಿಲ್ಲುವಂತಾಗಿದೆ.
ಸಂಚಾರಕ್ಕೆ ತೀವ್ರ ತೊಂದರೆ: ಕಿರಾಣಿ, ಬಾಂಡೆ ಅಂಗಡಿ ಸೇರಿದಂತೆ ಮುಖ್ಯ ವ್ಯಾಪಾರ ವಹಿವಾಟು ಇದೇ ಬೀದಿಯಲ್ಲಿ ಇದ್ದುದರಿಂದ ಮತ್ತು ಮುದಗಲ್, ಮಸ್ಕಿ, ತಾವರಗೇರಾ, ಲಿಂಗಸ್ಗೂರು, ಇಳಕಲ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ಖಾಸಗಿ ವಾಹನಗಳು ಇದೇ ರಸ್ತೆಯಲ್ಲಿ ಸಾಗುತ್ತಿದ್ದರಿಂದ ಸಂಚಾರಕ್ಕೆ ತೀವ್ರ ತೋಂದರೆಯಾಗಿದೆ.
ಗ್ರಾಮೀಣ ಪ್ರದೇಶದಿಂದ ಬರುವ ಟಂಟಂಗಳನ್ನು ರಸ್ತೆಯಲ್ಲಿ ಆಡ್ಡಾದಿಡ್ಡಿ ನಿಲ್ಲಿಸುತ್ತಿರುವುದನ್ನು ತಡೆಯಬೇಕು, ಬಂಡಿ ಅಂಗಡಿ, ತರಕಾರಿ ಮಾರಾಟವನ್ನು ರಸ್ತೆಗೆ ಅಡ್ಡ ನಿಲ್ಲಿಸುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಸ್ತೆ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕೆಂದು ಎಂದು ಸಂಬಂಧಿಸಿದ ಪೊಲೀಸ್ ಮತ್ತು ಪಪಂ ಮುಖ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.