ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರೈತರ ಸಮಸ್ಯೆ ಪರಿಹಾರ; 6 ತಿಂಗಳ ಗಡುವು

Lingaraj Badiger
Updated On : 18 May 2013, 11:51 am

ಕನ್ನಡಪ್ರಭ ವಾರ್ತೆ  ರಾಯಚೂರು  ಮೇ 17
ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರ ಕಾಳಜಿ ಹೊಂದಿದ್ದು, ಅಭಿವೃದ್ಧಿಯ ದೃಷ್ಟಿಕೋನ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಕ್ಕೆ 6 ತಿಂಗಳ ಗಡುವು ನೀಡಲಾಗುತ್ತದೆ. ಒಂದು ವೇಳೆ ರೈತರ ಆಶಯಗಳಿಗೆ ಸ್ಪಂದಿಸದಿದ್ದಲ್ಲಿ ಹೋರಾಟಕ್ಕಿಳಿಯುವುದು ಖಚಿತ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ರೈತ ಕುಟುಂಬದಿಂದ ಬಂದಿದ್ದು, ರೈತರ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆಂದು ರೈತ ಸಂಘ ನಂಬಿದೆ. ಹಾಗೆಯೇ ದುರಾಡಳಿತ, ಭ್ರಷ್ಟಾಚಾರದಿಂದ ನಲುಗಿರುವ ರಾಜ್ಯಕ್ಕೆ ಕಾಯಕಲ್ಪ ನೀಡಲಿದ್ದಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ನೀರಾವರಿ, ವಿದ್ಯುತ್ ಸಮಸ್ಯೆ: ಸದ್ಯ ರಾಜ್ಯದಲ್ಲಿ ರೈತರು ನೀರಾವರಿ ಮತ್ತು ವಿದ್ಯುತ್‌ಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ಅಭಾವದಿಂದಾಗಿ ರೈತಾಪಿ ವರ್ಗದವರು ಕಂಗಾಲಾಗಿದ್ದಾರೆ. ಅನೇಕ ಬಾರಿ ಬೆಳೆ ಹಾನಿಯನ್ನೂ ಅನುಭವಿಸಿದ್ದಾರೆ. ಇಂಥ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೀರಾವರಿ ಸಮಸ್ಯೆಗಳು ಹಾಗೂ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಮೊದಲಾದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಕಾರ್ಯನಿರ್ವಹಣೆ ಆರಂಭಗೊಂಡ ನಂತರ ರಾಜ್ಯ ರೈತ ಸಂಘದ ನಿಯೋಗವೊಂದು ಅವರನ್ನು ಭೇಟಿ ಮಾಡಿ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಭರವಸೆ ಮೂಡಿಸಿದ ಸಿಎಂ: ಅವರು ರಾಜ್ಯದ ಜನತೆಯಲ್ಲಿ ಭರವಸೆ ಮೂಡಿಸಿದ ಸಿಎಂ ಆಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ರೈತ ಸಂಘವು ರೈತರ ಸಮಸ್ಯೆಗಳ ಪರಿಹಾರಕ್ಕೆ ಆರು ತಿಂಗಳ ಗಡುವು ನೀಡುತ್ತದೆ. ಅವರು ರೈತರ ಬದುಕು ಸುಧಾರಣೆಗೆ ಮುಂದಾಗದಿದ್ದಲ್ಲಿ ಸಂಘದ ಹೋರಾಟ ಎಂದಿನಂತೆಯೇ ಮುಂದುವರಿಯಲಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ರೈತಪರ ಹೋರಾಟ ನಡೆಸಲಿ: ಮೇಲುಕೋಟೆ ಕ್ಷೇತ್ರದಲ್ಲಿ ರಾಜ್ಯ ರೈತ ಸಂಘದ ಮುಖಂಡ ಪುಟ್ಟಣ್ಣಯ್ಯ ಅವರಿಗೆ ಮತದಾರರು ಗೆಲ್ಲಿಸಿದ್ದಕ್ಕೆ ಅಭಿನಂದಿಸಿದ ಅವರು, ಪುಟ್ಟಣ್ಣಯ್ಯ ಅವರು ವಿಧಾನಸಭೆಯಲ್ಲಿ ರಾಜ್ಯದ ರೈತರ ಪರ ಹೋರಾಟ ನಡೆಸಲಿದ್ದಾರೆ. ರಾಜ್ಯದ ಎಲ್ಲ ಭಾಗದ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯ ಅವರು ಮಾಡಲಿದ್ದಾರೆ ಎಂದು ಹೇಳಿದರು.
ನಿಯೋಗ: ಜಿಲ್ಲೆಯಲ್ಲಿ ಕೃಷ್ಣಾ ನದಿ ನೀರಾವರಿ ಯೋಜನೆ ಅಡಿ ನಾರಾಯಣಪುರ ಬಲದಂಡೆ ಕಾಲುವೆಯ ವಿಸ್ತರಣೆ, ವಿದ್ಯುತ್ ಅಭಾವ ನೀಗಿಸುವುದು, ಅಂತರ್ಜಲ ಹೆಚ್ಚಳ ನಿಟ್ಟಿನಲ್ಲಿ ಪುರಾತನ ಕೆರೆಗಳ ಪುನಶ್ಚೇತನ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.
ರಾಜ್ಯ ರೈತ ಸಂಘದ ಪ್ರಮುಖರಾದ ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ, ವೆಂಕಟರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement