ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸೋಲಿಗೆ ಕಾರಣ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 17
ಲಿಂಗಸ್ಗೂರು ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಅವರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಕೆಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಅವರ ಸೋಲಿಗೆ ಕಾರಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಪ್ರತಿಕ್ರಿಯಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕ್ಷೇತ್ರದ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷದ ಪರವಾಗಿ ಕೆಲಸ ಮಾಡಿದ ಪರಿಣಾಮ ಹೂಲಗೇರಿ ಅವರು 30 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದಾರೆ. ಆದರೆ ಅವರು ನನ್ನ ಸೋಲಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಮತ್ತು ಅವರ ಬೆಂಬಲಿಗರು ಕಾರಣ ಎಂದು ಪರಾಜಿತ ಅಭ್ಯರ್ಥಿ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸೋಲಿಗೇನು ಕಾರಣ?: ಪಕ್ಷದ ಪರಾಜಿತ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಬೇರೆ ಜಿಲ್ಲೆಯವರಾಗಿದ್ದು, ಕ್ಷೇತ್ರದಲ್ಲಿ ಹೊಸಬರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರು ಸರಿಯಾಗಿ ಕ್ಷೇತ್ರದ ತುಂಬೆಲ್ಲಾ ಸುತ್ತಾಡಿ ಮತದಾರರನ್ನು ಭೇಟಿ ಮಾಡದೆ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರ ಸೇವೆ ಬಳಸಿಕೊಳ್ಳದೆ ಇರುವುದು ಪಕ್ಷದ ಸೋಲಿಗೆ ಪ್ರಮುಖ ಕಾರಣಗಳಾಗಿವೆ ಎಂದರು.
ಏಕಪಕ್ಷೀಯ ನಿರ್ಧಾರ- ಕಡೆಗಣನೆ: ಪಕ್ಷದ ಅಭ್ಯರ್ಥಿಯಾಗಿ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಲು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವಲ್ಲಿ ವಿಫಲರಾದ ಕುರಿತು ಜಿಲ್ಲಾ ಚುನಾವಣೆ ವೀಕ್ಷಕ ರುದ್ರರಾಜ ಪದ್ಮರಾಜ ಮತ್ತು ಆನಂದ ಭಾಸ್ಕರ ಇವರ ಗಮನಕ್ಕೆ ತರಲಾಗಿತ್ತು. ಆಗ ಇವರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವಂತೆ ಸೂಚಿಸಿದ್ದರೂ ಅಭ್ಯರ್ಥಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಕ್ಷದ ಕೆಲ ಮುಖಂಡರನ್ನು ಕಡೆಗಣಿಸಿದ್ದರು.
ಕಾರ್ಯಕರ್ತರಲ್ಲಿ ಗೊಂದಲ: ರಾಜ್ಯದಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿದ್ದ 177 ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ ಪಾಮಯ್ಯ ಮುರಾರಿ ಅವರ ಹೆಸರು ಪ್ರಕಟಿಸಲಾಗಿತ್ತು. ಆಗ ತಮ್ಮ ಪ್ರಭಾವ ಬಳಸಿ ಹೂಲಗೇರಿ ಅವರು ತಮಗೆ ಟಿಕೆಟ್ ದಕ್ಕುವಂತೆ ಪ್ರಯತ್ನ ನಡೆಸಿದ್ದರು. ಅಲ್ಲದೆ ಕೆಲ ಚುನಾಯಿತ ಪ್ರತಿನಿಧಿಗಳು ಸೇರಿಕೊಂಡು ಪಕ್ಷೇತರರಾಗಿ ಕಣಕ್ಕಿಳಿಯಲು ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದ್ದರು.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಾತಾವರಣ ನಿರ್ಮಾಣಗೊಂಡಿದ್ದರೂ ಕೆಲವರ ಕಡೆಗಣನೆ ಹಾಗೂ ಅವರ ದುರಹಂಕಾರದಿಂದ ಶಾಸಕ ಸ್ಥಾನ ಕಳೆದುಕೊಳ್ಳುವಂತಾಯಿತು ಎಂದು ಆರೋಪಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ತಾಪಂ ಸದಸ್ಯರಾದ ಬಸನಗೌಡ ಚಿತ್ತಾಪುರ, ಬಸವರಾಜ ನಾಯಕ ದೊಡ್ಡಹೊಲ, ರುದ್ರಗೌಡ, ಬಾಲಪ್ಪ ಮೆದಿಕಿನಾಳ, ಎಪಿಎಂಸಿ ನಿರ್ದೇಶಕ ರಡ್ಡೆಪ್ಪ, ಪುರಸಭೆ ಸದಸ್ಯ ಬಾಬುರೆಡ್ಡಿ, ಮುಖಂಡರಾದ ಬಸವರಾಜ ಗುತ್ತೇದಾರ, ಬಸವರಾಜಗೌಡ ಗಣೇಕಲ್, ದಿವಾಕರ ನಾಯಕ, ಅಮೀನ ಪಟೇಲ್, ಶಿವಪ್ಪ ಮಾಚನೂರ, ಮಲ್ಲೇಶಗೌಡ ಮಟ್ಟೂರ ಸೇರಿದಂತೆ ಇದ್ದರು.