ಹೋರಾಟದ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 17
ನಗರದಲ್ಲಿ ಕೈಗೆತ್ತಿಕೊಂಡಿರುವ ಚತುಷ್ಪಥ ರಸ್ತೆ ನಿರ್ಮಾಣ ಆಮೆ ವೇಗದಲ್ಲಿ ಸಾಗಿದೆ. ಅದೇ ರೀತಿ ರಸ್ತೆ ಅಗಲೀಕರಣ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದ್ದು, ಈ ನಿಟ್ಟಿನಲ್ಲಿ ಕೂಡಲೇ ಕಾಮಗಾರಿ ಚುರುಕುಗೊಳಿಸದಿದ್ದಲ್ಲಿ ಕರವೇ ಸಂಘಟನೆಯಿಂದ ಹೋರಾಟ ನಡೆಸುವುದಾಗಿ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಎಸ್ಪಿ ಕಚೇರಿಯಿಂದ ಆರ್‌ಟಿಒ ವೃತ್ತದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ 2011ರ ಅಕ್ಟೋಬರ್‌ನಲ್ಲಿ ಆರಂಭಗೊಂಡಿದೆ. 2013ರ ಅಕ್ಟೋಬರ್ ವೇಳೆಗೆ ಮುಗಿಯಬೇಕಿದೆ. ಆದರೆ ಆಮೆವೇಗದ ಕಾಮಗಾರಿ ಕೆಲವೆಡೆ ರಸ್ತೆ ಅಗಲೀಕರಣ ಸ್ಥಗಿತಗೊಂಡಿದ್ದರಿಂದ ರಸ್ತೆ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ತೆರವು- ಜಿಲ್ಲಾಡಳಿತ ನಿರ್ಲಕ್ಷ್ಯ: ಈ ಮಾರ್ಗದಲ್ಲಿ ವಿವಿಧ ಜನಾಂಗದ ಧಾರ್ಮಿಕ ಸ್ಥಳಗಳಿದ್ದು, ಅವುಗಳ ತೆರವು ಕಾರ್ಯ ಸ್ಥಗಿತಗೊಂಡಿದೆ. ಅದೇ ರೀತಿ ಅನೇಕ ವಾಣಿಜ್ಯ ಮಳಿಗೆಗಳೂ ರಸ್ತೆ ಅತಿಕ್ರಮಿಸಿದ್ದು ಅವುಗಳ ತೆರವು ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಪರಿಣಾಮ ಮುಂದಿನ ಐದು ತಿಂಗಳಿನಲ್ಲಿ ರಸ್ತೆ ನಿರ್ಮಾಣ ಪೂರ್ಣಗೊಳ್ಳುವುದು ಬಹುತೇಕ ಅನುಮಾನ ಎಂಬಂಥ ಸ್ಥಿತಿಯಿದೆ ಎಂದು ಆರೋಪಿಸಿದರು.
31 ಕೋಟಿ ವೆಚ್ಚದಲ್ಲಿ ಈ ರಸ್ತೆ ಅಗಲೀಕರಣ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಕಾಮಗಾರಿ ಆಮೆ ವೇಗದಲ್ಲಿ ಸಾಗಿದ್ದು, ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು, ಸಂಚಾರ ಠಾಣೆಯ ಪೊಲೀಸರು ವಾಹನ ಸಂಚಾರ ನಿಯಂತ್ರಣಕ್ಕೆ ಹೆಣಗಾಡುವಂತಾಗಿದೆ ಎಂದು ದೂರಿದರು.
ಶೀಘ್ರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಿ: ಚತುಷ್ಪಥ ರಸ್ತೆಯ ನಿರ್ಮಾಣದಿಂದಾಗಿ ಧೂಳುಮಯ ವಾತಾವರಣ ನಿರ್ಮಾಣವಾಗಿದ್ದು ಧೂಳು ನಿಯಂತ್ರಣಕ್ಕೆ ಆಡಳಿತ ಮುಂದಾಗಿಲ್ಲ. ಅದೇ ರೀತಿ ಈ ಮಾರ್ಗದಲ್ಲಿ ಅನೇಕ ಧಾರ್ಮಿಕ ಸ್ಥಳಗಳಿದ್ದು ರಸ್ತೆ ಅಗಲೀಕರಣಕ್ಕೆ ಈ ಧಾರ್ಮಿಕ ಕೇಂದ್ರಗಳ ತೆರವಿಗೆ ಜಿಲ್ಲಾಡಳಿತ ಕೂಡಲೇ ಮುಂದಾಗಬೇಕು. ಈ ನಿಟ್ಟಿನಲ್ಲಿ ಕಟ್ಟಡಗಳ ತೆರವಿಗೂ ಮೊದಲು ಆಯಾ ಧಾರ್ಮಿಕ ಕೇಂದ್ರಗಳ ಪ್ರಮುಖರು ಹಾಗೂ ಧರ್ಮದ ಮುಖಂಡರೊಂದಿಗೆ ಸಭೆ ನಡೆಸಿ ಕೂಡಲೇ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಗರದ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ಸದ್ಯ ಜಾರಿಯಲ್ಲಿರುವ ಚತುಷ್ಪಥ ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳಿಸುವ ಅಗತ್ಯವಿದೆ. ಅದರಿಂದ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ ಎಂದ ಅವರು, ನಗರದ ಬಸ್ ನಿಲ್ದಾಣದಿಂದ ಶೆಟ್ಟಿ ಭಾವಿ ವೃತ್ತದ ಮೂಲಕ ವಾಸವಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಅಗಲೀಕರಣ ಮಾಡುವತ್ತ ಜಿಲ್ಲಾಡಳಿತ ಕೂಡಲೇ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
15 ದಿನದ ಗಡುವು: ಜಿಲ್ಲಾಡಳಿತ ನಗರದಲ್ಲಿ ಜಾರಿಯಲ್ಲಿರುವ ಚತುಷ್ಪಥ ರಸ್ತೆ ನಿರ್ಮಾಣ ಚುರುಕುಗೊಳಿಸಬೇಕು. ರಸ್ತೆ ಅಗಲೀಕರಣಕ್ಕೆ ಕೂಡಲೇ ಚಾಲನೆ ನೀಡಬೇಕು. ತಪ್ಪಿದಲ್ಲಿ ಮುಂದಿನ 15ದಿನದಲ್ಲಿ ಕರವೇ ಸಂಘಟನೆಯು ನಗರದ ಅಭಿವೃದ್ಧಿಯ ಉದ್ದೇಶದಿಂದ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಖಲೀಲ್ ಪಾಷಾ, ಮಾನಸಿಂಗ್ ಠಾಕೂರ್, ರಘುವೀರನಾಯಕ್, ಮುಮ್ತಾಜುದ್ದೀನ್, ನಾಗರಾಜ್ ಬಿಚ್ಚಾಲಿ ಸೇರಿದಂತೆ ಅನೇಕರಿದ್ದರು.