ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

4 ಶಾಸಕರಿದ್ದರೂ 'ಕೈ' ಹಿಡಿಯಲಿಲ್ಲ

Vishwanath S
Updated On : 19 May 2013, 11:53 am

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಮೇ 18
ಹೈಕಮಾಂಡ್ ಮೇಲೆ ಪ್ರಭಾವ ಬೀರುವಲ್ಲಿ ಜಿಲ್ಲೆಯ ಶಾಸಕರು ವಿಫಲ. ಕಾಂಗ್ರೆಸ್‌ನ ಶಾಸಕರು ಚುನಾವಣೆಯಲ್ಲಿ ಗೆದ್ದಿದ್ದರೂ, ಹೈಕಮಾಂಡ್ ಮುಂದೆ ಸೋಲೊಪ್ಪಿಕೊಂಡರು. ಜಿಲ್ಲೆಯಿಂದ ನಾಲ್ವರು ಕಾಂಗ್ರೆಸ್ಸಿಗರನ್ನು ಗೆಲ್ಲಿಸಿದ್ದರೂ ಒಂದೂ ಸಚಿವ ಸ್ಥಾನ ದಕ್ಕಲಿಲ್ಲ, ಜನತೆಗೆ ನಿರಾಸೆ ತಪ್ಪಲಿಲ್ಲ.
ಜಿಲ್ಲೆಗೆ ಕೊನೆಗೂ ಸಚಿವ ಸ್ಥಾನ ನಿರೀಕ್ಷೆಯಂತೆ ಸಚಿವ ಸ್ಥಾನ ಕೈತಪ್ಪಿದೆ. ಹೈಕಮಾಂಡ್ ಮೇಲೆ ಪ್ರಭಾವ ಬೀರುವಷ್ಟು ಪ್ರಭಾವಿಗಳಲ್ಲದ ಜಿಲ್ಲೆಯ ನಾಯಕರಿಂದಾಗಿಯೇ ಈ ನಿಟ್ಟಿನಲ್ಲಿ ಸೋಲಾಗಿದೆ ಎಂಬುದು ಅಷ್ಟೇ ಸ್ಪಷ್ಟ. ರಾಜಕೀಯ ಕ್ಷೇತ್ರದಲ್ಲಿನ ಹಿರಿತನ, ಪಕ್ಷ ನಿಷ್ಠೆಗೆ ಬೆಲೆ ದೊರೆಯದಿರುವುದು ಜಿಲ್ಲೆಯ ಮಟ್ಟಿಗೆ ಸಾಬೀತಾಗಿದೆ.
ಕಾಂಗ್ರೆಸ್ಸಿಂದ 4 ಶಾಸಕರು: ಜಿಲ್ಲೆಯ ದೇವದುರ್ಗ, ಮಾನವಿ, ಸಿಂಧನೂರು ಹಾಗೂ ಮಸ್ಕಿ ಕ್ಷೇತ್ರಗಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ನಾಲ್ವರು ಕಾಂಗ್ರೆಸ್ ಪಕ್ಷದವರನ್ನು ಜಿಲ್ಲೆಯ ಮತದಾರರು ಆಯ್ಕೆ ಮಾಡಿದ್ದಾರೆ. ಕಳೆದ ಸಾರಿಗಿಂತ ಒಂದು ಸ್ಥಾನ ಹೆಚ್ಚು ಪಕ್ಷಕ್ಕೆ ನೀಡಿದ್ದಾರೆ.
ಮಾನವಿ ಮತ್ತು ಮಸ್ಕಿ ಕ್ಷೇತ್ರದ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರಲಿಲ್ಲ. ಆದರೆ ಜಿಲ್ಲೆಯ ಹಿರಿಯ ರಾಜಕೀಯ ನಾಯಕ, ಕಾಂಗ್ರೆಸ್‌ಗೆ ನಿಷ್ಠರಾಗಿರುವ ಹಾಗೂ ನಾಲ್ಕು ಬಾರಿ ಸಂಸದರಾಗಿ ಕಾರ್ಯನಿರ್ವಹಿಸಿದ್ದ ದೇವದುರ್ಗ ಶಾಸಕ ವೆಂಕಟೇಶ ನಾಯಕ ಅವರು ಈ ಬಾರಿ ದೇವದುರ್ಗ ಕ್ಷೇತ್ರದ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ದೊರೆಯುವುದೆಂಬ ನಿರೀಕ್ಷೆಯಿತ್ತು. ಆದರೆ ಅಂಥ ನಿರೀಕ್ಷೆಯೀಗ ಹುಸಿಯಾಗಿದೆ.
ಇನ್ನು ಕಾಂಗ್ರೆಸ್‌ನಿಂದ ಎರಡು ಬಾರಿ ಹಾಗೂ ಜನತಾ ಪರಿವಾರದಿಂದ ಎರಡು ಬಾರಿ ಶಾಸಕರಾಗಿರುವ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಸಹ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದರು. ಆದರೆ ಅವರ ಪ್ರಯತ್ನ ಕೈಗೂಡಿಲ್ಲ.
ಮುಂದಿನ ದಿನಗಳಲ್ಲಿ ಪರಿಗಣಿಸುವ ಸಾಧ್ಯತೆ: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ದೇವದುರ್ಗ ಶಾಸಕ ವೆಂಕಟೇಶ ನಾಯಕ ಅವರು, ಪಕ್ಷದ ನಿರ್ಧಾರಕ್ಕೆ ಬದ್ಧ. ಸಚಿವ ಸ್ಥಾನ ತಮಗೆ ನೀಡುವ ವಿಶ್ವಾಸವಿತ್ತು. ಆದರೆ ಹೈಕಮಾಂಡ್ ನಿರ್ಣಯ ಪ್ರಶ್ನಿಸುವುದಿಲ್ಲ. ಮುಂದಿನ ದಿನಗಳಲ್ಲಿ ತಮಗೆ ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ಹೊರ ಜಿಲ್ಲೆಯವರು ನಿರ್ವಹಿಸಿದ್ದರು. ಜಿಲ್ಲೆಯಿಂದ ಆಗ ಶಿವನಗೌಡ ನಾಯಕ ಅವರಿಗೆ ಸಚಿವ ಸ್ಥಾನ ಕೆಲ ಅವಧಿಗೆ ದಕ್ಕಿದ್ದರೂ ಅವರಿಗೆ ಜಿಲ್ಲೆಯ ಹೊಣೆ ಒಪ್ಪಿಸಿರಲಿಲ್ಲ. ಈಗ ಜಿಲ್ಲೆಯಿಂದ ಒಬ್ಬರಿಗೂ ಸಚಿವ ಸ್ಥಾನ ದಕ್ಕಿಲ್ಲ.
ಜಿಲ್ಲೆಯಿಂದ ನಾಲ್ವರು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದರೂ ಪಕ್ಷದ ಹೈಕಮಾಂಡ್ ಇಲ್ಲಿನ ಮತದಾರರ ಆಕಾಂಕ್ಷೆಗೆ ತಣ್ಣೀರೆರಚಿದೆ. ನೆರೆಯ ಗುಲ್ಬರ್ಗ, ಬೆಂಗಳೂರು, ಮೈಸೂರು, ಮಂಗಳೂರು ಮತ್ತಿತರೆ ಜಿಲ್ಲೆಗಳಿಗೆ ಎರಡಕ್ಕಿಂತ ಹೆಚ್ಚಿನ ಸಚಿವ ಸ್ಥಾನ ನೀಡಿದೆ. ಆದರೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಮನಸು ಮಾಡದಿರುವುದು ಕಾಂಗ್ರೆಸ್ ಪಕ್ಷದ ಜಿಲ್ಲೆಯೆಡೆಗಿನ ಧೋರಣೆ ಹೊರಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement