'ಗೋಹತ್ಯೆ ನಿಷೇಧಕ್ಕೆ ಸಿಎಂ ಮುಂದಾಗಲಿ'
ಸಿಂಧನೂರು: ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿರುವ ಸಿದ್ದರಾಮಯ್ಯ ಅವರು ಅನೇಕ ಜನೋಪಯೋಗಿ ಯೋಜನೆಗಳಿಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಆದರೆ ಹಾಲು ನೀಡುವ ಗೋವುಗಳ ಸಂತತಿ ಸಂರಕ್ಷಿಸಲು ಗೋ ಹತ್ಯೆ ಕಾಯಿದೆ ನಿಷೇಧವನ್ನು ನಿರ್ಭಿಡೆಯಿಂದ ಜಾರಿಗೆ ತರಬೇಕೆಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ರಾಜ್ಯ ಸಂಚಾಲಕ ಕೆ. ಬಾಳಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಲಕ್ಷಾಂತರ ಹಸುಗಳು ಮುಂಬೈ, ಹೈದ್ರಾಬಾದ್, ಉತ್ತರ ಪ್ರದೇಶಗಳಿಗೆ ಪ್ರತಿನಿತ್ಯ ಮಾರಾಟ ನಡೆಯುತ್ತಿವೆ. ಹಸುಗಳ ಮಾಂಸ ಹಡಗುಗಳ ಮೂಲಕ ಪಾಶ್ಚಾತ್ಯ ರಾಷ್ಟ್ರಗಳಿಗೆ ರವಾನೆಯಾಗುತ್ತಿದೆ. 1964ರ ಗೋಹತ್ಯೆ ಕಾಯಿದೆಯನ್ನು ಜಾರಿಗೆಗೊಳಿಸಿ ಅವುಗಳ ಹಲ್ಲೆಗೆ ವಿರೋಧ ಇಲ್ಲವೆಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ಖಂಡನೀಯ. ಗೋವುಗಳು ಪೂಜ್ಯನೀಯವಾಗಿದ್ದು ಭಾರತೀಯ ಸಂಸ್ಕೃತಿಯಲ್ಲಿ ತಮ್ಮದೇ ಆದ ಮಹತ್ವ ಪಡೆದಿವೆ. ಗೋ ಪೂಜೆ ಇಲ್ಲದೇ ಯಾವುದೇ ಶುಭ- ಸಮಾರಂಭಗಳು ನಡೆಯುವುದಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಗೋವುಗಳ ಸಂತತಿ ಕ್ಷೀಣಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಗೋವುಗಳ ಸಂರಕ್ಷಣೆಗೆ ಗೋಶಾಲೆಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.