ನಗರಸಭೆ ನಿರ್ಲಕ್ಷ್ಯ ಖಂಡಿಸಿ 27ರಂದು ದಸಂಸ ಧರಣಿ
ರಾಯಚೂರು: 1993-94ನೇ ಸಾಲಿನಲ್ಲಿ ಆಶ್ರಯ ಯೋಜನೆ ಅಡಿ ಹಕ್ಕುಪತ್ರ ನೀಡಿ ಜಾಗ ಗುರುತಿಸದೇ ಅನ್ಯಾಯ ಮಾಡಿರುವ ನಗರಸಭೆಯ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮೇ 27ರಂದು ರಾಜ್ಯ ದಲಿತ ಸಂಘರ್ಷ ಸಮಿತಿ ಧರಣಿ ನಡೆಸಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ತಾಲೂಕು ಸಂಚಾಲಕ ಹನುಮಂತ ಅರೋಲಿಕರ್, 1993-94ನೇ ಸಾಲಿನಲ್ಲಿ ನಗರದ ಚಂದ್ರಬಂಡಾ ಪ್ರದೇಶದ ಹಳೆಯ ಆಶ್ರಯ ಕಾಲೋನಿಯ ಬಡವರಿಗೆ ನಗರಸಭೆಯಿಂದ ಆಶ್ರಯ ಯೋಜನೆಯಡಿ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ. ಆದರೆ ಅವರಿಗೆ ಮಂಜೂರಾಗಿರುವ ಜಾಗ ಗುರುತಿಸಿ ಬಡವರಿಗೆ ಒದಗಿಸಿಲ್ಲ. ಇದರಿಂದ ಯೋಜನೆಯ ಲಾಭ ಬಡವರಿಗೆ ದೊರೆತಿಲ್ಲ. ಆಡಳಿತ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.
ಹಕ್ಕುಪತ್ರ ಪಡೆದ ಕಡುಬಡವರಿಗೆ ಕೂಡಲೇ ನಗರಸಭೆ ಜಾಗ ಗುರುತಿಸಿ ಒದಗಿಸದಿದ್ದಲ್ಲಿ ಮೇ 27ರಂದು ದಲಿತ ಸಂಘರ್ಷ ಸಮಿತಿಯು ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.