ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾಲಕರೆಡ್ಡಿಗೆ ತಪ್ಪಿತು ಸಚಿವ ಸ್ಥಾನ: ಹೆಚ್ಚಿತು ಕಾರ್ಯಕರ್ತರ ಆಕ್ರೋಶ

Vishwanath S
Updated On : 19 May 2013, 11:53 am

ಕನ್ನಡಪ್ರಭ ವಾರ್ತೆ ,  ಯಾದಗಿರಿ ,  ಮೇ 18
ಯಾದಗಿರಿ ಕ್ಷೇತ್ರದ ಶಾಸಕ ಡಾ.ಎ.ಬಿ.ಮಾಲಕರೆಡ್ಡಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದರಿಂದ ಆಕ್ರೋಶಗೊಂಡ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯಕ್ಕೆ ನುಗ್ಗಿ ಕಿಟಕಿಗೆ ಬೆಂಕಿ ಹಚ್ಚಿ, ಪೀಠೋಪಕರಣಗಳನ್ನು ಪುಡಿಪುಡಿ ಮಾಡಿದ ಘಟನೆ ಶನಿವಾರ ಜರುಗಿದೆ.
ಪಕ್ಷದಲ್ಲಿ ಹಿರಿಯರಾಗಿರುವ ಹಾಗೂ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಮಾಲಕರೆಡ್ಡಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತ ಎಂದೇ ಕಾರ್ಯಕರ್ತರು ಶುಕ್ರವಾರದವರೆಗೂ ನಿರೀಕ್ಷಿಸಿದ್ದರು.
ಆದರೆ, ಶನಿವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಮಾಲಕರೆಡ್ಡಿ ಹೆಸರಿಲ್ಲದಿದ್ದರಿಂದ ರೊಚ್ಚಿಗೆದ್ದ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ನೇರವಾಗಿ ಕಾಂಗ್ರೆಸ್ ಕಾರ್ಯಾಲಯಕ್ಕೆ ನುಗ್ಗಿ ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಅಲ್ಲಿದ್ದ ಕುರ್ಚಿ, ಟೇಬಲ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಮಾಲಕರೆಡ್ಡಿಯವರಿಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಹೈಕಮಾಂಡ್‌ಗೆ ದಿಕ್ಕಾರದ ಘೋಷಣೆ ಕೂಗಿದರು.
ರಣರಂಗವಾಯಿತು ಕಚೇರಿ: ಇದರಿಂದ ಸುಮಾರು ಅರ್ಧ ಗಂಟೆ ಕಾಂಗ್ರೆಸ್ ಕಾರ್ಯಾಲಯ ರಣರಂಗವಾಗಿತ್ತು. ನಂತರ ಆಕ್ರೋಶಭರಿತರಾಗಿ ಮಾತನಾಡಿದ ಕಾರ್ಯಕರ್ತರು, ಮಾಲಕರೆಡ್ಡಿವರಿಗೆ ಕಾಂಗ್ರೆಸ್ ಹೈಕಮಾಂಡ್ ಮೋಸ ಮಾಡಿದೆ. ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸಂಪುಟ ವಿಸ್ತರಣೆ ವೇಳೆ ಮಾಲಕರೆಡ್ಡಿವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಮುಂದೆ ಸಾಮೂಹಿಕ ರಾಜಿನಾಮೆ ನೀಡಲಾಗುವುದು ಎಂದು ಎಚ್ಚರಿಸಿದರು.
ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು. ಕಾರ್ಯಕರ್ತರನ್ನು ಚೆದುರಿಸಿ ತಾಳ್ಮೆಗೆಡದಂತೆ ತಿಳಿಸಿದರು. ನಂತರ ಪರಿಸ್ಥಿತಿ ಶಾಂತಿಗೊಂಡಿತಾದರೂ ಕಾರ್ಯಕರ್ತರಲ್ಲಿನ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿತ್ತು. ನಂತರ ರಸ್ತೆಗೆ ಬಂದ ಕಾರ್ಯಕರ್ತರು ಅಲ್ಲಿ ಟೈರ್‌ಗೆ ಬೆಂಕಿ ಹಚ್ಚಿದರು.
ತಾಳ್ಮೆ ಕಳೆದುಕೊಳ್ಳಬೇಡಿ: ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಲಕರೆಡ್ಡಿ 'ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು. ಈ ರೀತಿ ಬೆಂಕಿ ಹಚ್ಚುವುದು, ಪೀಠೋಪಕರಣ ಧ್ವಂಸ ಮಾಡುವುದರಿಂದ ನನಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಇಂಥ ಚಟುವಟಿಕೆಯನ್ನು ತಕ್ಷಣ ಕೈಬಿಡಬೇಕು. ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ'ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement