ಅಧಿಕಾರಿಗಳ ನಿರ್ಲಕ್ಷ್ಯ; ಹಾಸ್ಟೆಲ್ ಅವ್ಯವಸ್ಥೆ
ಲಿಂಗಸ್ಗೂರು: ಪಟ್ಟಣದ ಮೆಟ್ರಿಕ್ ನಂತರದ ಅಂಬೇಡ್ಕರ್ ವೃತ್ತಿಪರ ವಸತಿ ನಿಲಯದ ಮೇಲ್ವಿಚಾರಕರ ಹಾಗೂ ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆಯಿಂದ ಕೂಡಿದೆ ಎಂದು ವಿದ್ಯಾರ್ಥಿನಿಯರು ಭಾನುವಾರ ಆರೋಪಿಸಿದರು.
ವಸತಿ ನಿಲಯದಲ್ಲಿ 50 ಜನ ವಿದ್ಯಾರ್ಥಿನಿಯರಿದ್ದು, ನಿಲಯದ ಸುತ್ತಮುತ್ತಲ ಪ್ರದೇಶದಲ್ಲಿ ಜಾಲಿ ಮರಗಳು ಬೆಳೆದು ನಿಂತಿದ್ದು, ಕಲುಷಿತ ವಾತಾವರಣ ನಿರ್ಮಾಣಗೊಂಡಿದೆ. ನಿಲಯದಲ್ಲಿ ಕುಡಿಯುವ ನೀರಿನ ತೊಂದರೆ ಇರುತ್ತದೆ. ನಿಲಯಕ್ಕೆ ಪೂರೈಕೆ ಮಾಡುವ ಆಹಾರಧಾನ್ಯ ಗುಣಮಟ್ಟದಿಂದ ಕೂಡಿರದೆ ಹುಳುಗಳು ಕಾಣಿಸಿಕೊಂಡಿವೆ. ತರಕಾರಿ ಕೂಡ ಇದಕ್ಕೆ ಹೊರತಾಗಿಲ್ಲ. ವಿದ್ಯಾಥಿನಿಯರಿಗೆ ಸರಿಯಾಗಿ ಉತ್ತಮ ಊಟ ಸಿಗುತ್ತಿಲ್ಲ. ನಿಲಯದಲ್ಲಿ ಫ್ಯಾನ್ ಅಳವಡಿಸಲಾಗಿಲ್ಲ ಎಂದು ದೂರಿದರು.
ನಿಲಯದ ಮೇಲ್ವಿಚಾರಕಿ ಕಳೆದ ಸುಮಾರು 20 ದಿನಗಳಿಂದ ನಾಪತ್ತೆಯಾಗಿದ್ದಾರೆ. ನಿಲಯ ಆರಂಭಗೊಂಡಾಗಿನಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಲಯಕ್ಕೆ ಭೇಟಿ ನೀಡಿಲ್ಲ. ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಗಮನ ಹರಿಸಿ ವಿದ್ಯಾರ್ಥಿಗಳಿಗೆ ಸೌಕರ್ಯ ಕಲ್ಪಿಸುವಲ್ಲಿ ಗಮನ ಹರಿಸಬೇಕೆಂಬುದು ನಿಲಯದ ವಿದ್ಯಾರ್ಥಿನಿಯರಾದ ಲಲಿತಾ, ಶಂಕ್ರಮ್ಮ, ಹುಲಿಗೆಮ್ಮ, ವಿಜಯಲಕ್ಷ್ಮೀ, ಜಯಮ್ಮ, ನಾಗು, ಗಿರಿಜಾ, ಮಾಧವಿ, ರೇಣುಕಾ, ಜ್ಯೋತಿ ಸೇರಿದಂತೆ ವಿದ್ಯಾರ್ಥಿನಿಯರ ಒತ್ತಾಯ.