ನಂದವಾಡಗಿ': ಶೀಘ್ರದಲ್ಲೇ ಭೂಮಿ ಪೂಜೆ
ಮುದಗಲ್: ನಂದವಾಡಗಿ ಏತ ನೀರಾವರಿ ಕಾಮಗಾರಿಯ ಭೂಮಿ ಪೂಜೆಯನ್ನು ಮಂತ್ರಿಮಂಡಲ ರಚನೆಯಾದ ಕೂಡಲೇ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ನಿಗದಿಪಡಿಸಲಾಗುವುದು ಎಂದು ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದಲ್ಲಿ ಪಡಿತರ ಅರ್ಜಿ ಕೇಂದ್ರದ ಚಾಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಪೂರ್ವ ದಲ್ಲಿ ನಾನು ನಂದವಾಡಗಿ ಏತ ನೀರಾವರಿ ಯೋಜನೆಯ ಭೂಮಿ ಪೂಜೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದೆ. ಅದರಂತೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಸಚಿವ ಸಂಪುಟ ರಚನೆಯಾದ ಕೂಡಲೇ ಸಂಬಂಧಿಸಿದ ಸಚಿವರೊಡನೆ ಚರ್ಚಿಸಿ ದಿನಾಂಕ ನಿಗದಿಪಡಿಸಿ ಪೂಜೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದಲ್ಲಿಯ ಧಾರ್ಮಿಕ ಕ್ಷೇತ್ರಗಳಾದ ಸಜ್ಜಲಗುಡ್ಡ, ಅಂಕಲಿಮಠಗಳ ಅಭಿವೃದ್ಧಿ, ಮತ್ತು ಮುದಗಲ್ ಕೋಟೆ, ಜಲದುರ್ಗ ಕೋಟೆಗಳ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ರ ಕ್ರಮ ಕೈಕೊಳ್ಳಲಾಗುವುದು. ಜೊತೆಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುದಗಲ್ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ, ಜೆಡಿಎಸ್ ಮುದಗಲ್ ಬ್ಲಾಕ್ ಅದ್ಯಕ್ಷ ಅಮೀರಬೇಗ್ ಉಸ್ತಾದ, ಪಪಂ ಸದಸ್ಯರಾದ ವೀರೇಶ ವಡ್ಡರ, ಹೇಮಂತಕುಮಾರ ನಾಗಲಾಪುರ, ಅಬ್ದುಲ್ ರವೂಫ್, ಖಾಜಾಪಾಷಾ ಗಾಡಿವಾನ, ಪಕ್ಷದ ಮುಖಂಡರಾದ ಎಂ.ಡಿ. ರಜಾಕ್ ಇದ್ದರು.
ಶಾಸಕ ವಜ್ಜಲ್‌ಗೆ ಸನ್ಮಾನ: ಲಿಂಗಸ್ಗೂರು ಮೀಸಲು ವಿಧಾನಸಭೆ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾನಪ್ಪ ವಜ್ಜಲ್ ಅವರಿಗೆ ಪಪಂ ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮೀ ಮತ್ತು ಸಿಬ್ಬಂದಿ ಪಪಂ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಿದರು. ಜೆಡಿಎಸ್ ಬ್ಲಾಕ್ ಅದ್ಯಕ್ಷ ಅಮೀರಬೇಗ್ ಉಸ್ತಾದ, ಪಪಂ ಸದಸ್ಯರಾದ ವೀರೇಶ ವಡ್ಡರ, ಹೇಮಂತಕುಮಾರ ನಾಗಲಾಪುರ, ಅಬ್ದುಲ್ ರವುಫ್, ರಜ್ಜಬ ಹಳೆಪೇಟ, ಸೇರಿದಂತೆ ಇನ್ನಿತರರಿದ್ದರು.