ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರದಲ್ಲಿ ನೂತನ ಶಾಸಕರ ಸಂಚಾರ

Rashmi Kasaragodu
Updated On : 20 May 2013, 11:30 am

ಕನ್ನಡಪ್ರಭ ವಾರ್ತೆ   ರಾಯಚೂರು   ಮೇ 19
ನಗರದ ವಿವಿಧ ಬಡಾವಣೆಗಳಿಗೆ ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ಜತೆ ಭೇಟಿ ನೀಡಿದ ನಗರದ ನೂತನ ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹರಿಜನವಾಡ, ಸಿಯಾತಲಾಬ್, ಮಕ್ತಲ್‌ಪೇಟೆ, ಜಲಾಲ್ ನಗರ, ಮಡ್ಡಿಪೇಟೆ ಮತ್ತಿತರಡೆ ಬಡಾವಣೆಗಳಿಗೆ ಭಾನುವಾರ ಬೆಳಗ್ಗೆ ಧಾವಿಸಿದ ಶಾಸಕ ಡಾ. ಶಿವರಾಜ್ ಪಾಟೀಲ್, ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಗರಸಭೆ ಅಧಿಕಾರಿಗಳ ತರಾಟೆಗೆ: ಈ ವೇಳೆ ಸ್ಥಳೀಯರು ಬಡಾವಣೆಗಳಲ್ಲಿ ಎದುರಿಸುತ್ತಿರುವ ಮೂಲ ಸೌಲಭ್ಯಗಳ ಕೊರತೆಯ ಸಮಸ್ಯೆಯನ್ನು ಶಾಸಕರೆದುರು ಅಳಲು ತೋಡಿಕೊಂಡರು. ಈ ವೇಳೆ ಹರಿಜನವಾಡ ಪ್ರದೇಶದಲ್ಲಿ ಮಹಿಳೆಯರಿಗೆ ಶೌಚಾಲಯ ಹಾಗೂ ಮೂಲ ಸೌಲಭ್ಯಗಳ ಅವ್ಯವಸ್ಥೆ ಗಮನಿಸಿದ ಶಾಸಕರು ನಗರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಯಕ್ಕೆ ಸರಿಯಾಗಿ ನಗರಸಭೆ ಸಿಬ್ಬಂದಿ ಈ ಪ್ರದೇಶಕ್ಕೆ ತೆರಳಿ ಸ್ವಚ್ಛತೆ ಕಾಯ್ದುಕೊಳ್ಳದಿರುವುದು ಹಾಗೂ ಸಮರ್ಪಕ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಗಮನಹರಿಸದಿರುವ ಬಗ್ಗೆ ನಗರಸಭೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಯುಜಿಡಿ ಕಾಮಗಾರಿ ತೊಡಕು: ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ ಸಹ ಸಿಬ್ಬಂದಿಯ ಅಸಮರ್ಪಕ ಕಾರ್ಯನಿರ್ವಹಣೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಈ ವೇಳೆ ವಾರ್ಡ್ ಸಂಖ್ಯೆ 23ರಲ್ಲಿ ನಗರಸಭೆ ಸದಸ್ಯ ದೊಡ್ಡಮಲ್ಲೇಶ ಅವರು ಆಡಳಿತದ ಕಾರ್ಯವೈಖರಿಗೆ ತೀವ್ರ ಬೇಸರ ವ್ಯಕ್ತಪಡಿಸಿ ನಗರಸಭೆಯ ಅಧಿಕಾರಿಗಳು ಕಚೇರಿಯಿಂದ ಹೊರಬರುತ್ತಿಲ್ಲ. ಕಚೇರಿಯಲ್ಲಿಯೇ ಕುಳಿತು ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ವಿವಿಧ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಸಾಕಷ್ಟಿದೆ. ಚರಂಡಿ ಸ್ವಚ್ಛತೆ, ರಾಜಾ ಕಾಲುವೆ ಸ್ವಚ್ಛತೆ, ಶೌಚಾಲಯ ನಿರ್ವಹಣೆ, ಸೇರಿದಂತೆ ಬಡಾವಣೆಗಳಲ್ಲಿ ಜನತೆ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ನಗರಸಭೆಯ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ನಗರೋತ್ಥಾನ ಯೋಜನೆ 6 ಕೋಟಿ ಲಭ್ಯವಿದ್ದು, ಈ ಯೋಜನೆ ಅಡಿ ನಗರದಲ್ಲಿ ಒಟ್ಟು 11 ನೀರಿನ ತೊಟ್ಟಿಗಳನ್ನು ನಿರ್ಮಿಸುವಂತೆ ಸೂಚಿಸಿದ ಶಾಸಕರಿಗೆ ನಗರಸಭೆ ಅಧಿಕಾರಿಗಳು ಪ್ರತಿಕ್ರಿಯಿಸಿ, ನಗರದಲ್ಲಿ ಈ ಕಾಮಗಾರಿಗಳ ನಿರ್ವಹಣೆಗೆ ಯುಜಿಡಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ತೊಡಕಾಗಿದೆ ಎಂದು ವಿವರಿಸಿದರು.
ಕಾರ್ಮಿಕರ ನೇಮಕಕ್ಕೆ ಆದೇಶ: ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜಾ ಕಾಲುವೆಗಳ ಸ್ವಚ್ಛತೆ ಮತ್ತು ದುರಸ್ತಿಗೆ ಅಗತ್ಯ ಸಂಖ್ಯೆಯ ಕಾರ್ಮಿಕರನ್ನು ನೇಮಿಸುವಂತೆ ಶಾಸಕ ಡಾ. ಶಿವರಾಜ್ ಪಾಟೀಲ್ ಆದೇಶಿಸಿ, ಮಳೆಗಾಲಕ್ಕೂ ಮುನ್ನ ರಾಜಾ ಕಾಲುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ಮಳೆಯ ನೀರು ಮನೆಗಳಿಗೆ ನುಗ್ಗದಂತೆ ತಡೆಯಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಪೌರಾಯುಕ್ತ ಮಂಜುನಾಥ, ಎಇಇ ವೆಂಕಟೇಶ್, ನಗರಸಭೆ ಸದಸ್ಯರಾದ ಯಲ್ಲಪ್ಪ, ಬೂದೆಪ್ಪ, ದೊಡ್ಡಮಲ್ಲೇಶ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಸೈಯದ್ ಮಾಸೂಮ್, ಯುಸೂಫ್ ಖಾನ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement