ರೈತರ ಬೆಳೆಗೆ ಮೋಸದ ಬೆಲೆ ನಿಗದಿ: ಚಾಮರಸ
ಕನ್ನಡಪ್ರಭ ವಾರ್ತೆ ಮುದಗಲ್ ಮೇ 19
ದೇಶದ ಬೆನ್ನೆಲುಬು ಎಂದು ಹೇಳುವ ರೈತರ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಅಭಿಪ್ರಾಯಪಟ್ಟರು.
ಸಮೀಪದ ತಿಮ್ಮಾಪುರ ಕ್ರಾಸ್ನಲ್ಲಿ ಬಸವ ಜಯಂತಿ ಶತಮಾನೋತ್ಸವ, ವಿಶ್ವಶರಣ ಸಂಕುಲ ಕಲ್ಯಾಣಾಶ್ರಮದ ಅಡಿಗಲ್ಲು ಸಮಾರಂಭ ಮತ್ತು ಗ್ರಾಮೀಣ ಶರಣ ಸಂಸ್ಕೃತಿ ಮಹಾಮೇಳದಲ್ಲಿ ರೈತಪರ ಚಿಂತನಾ ಘೋಷ್ಠಿಯಲ್ಲಿ ಮಾತನಾಡಿ, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಕೃಷಿಯಿಂದ ವಿಮುಖ: ಸರ್ಕಾರಗಳು ರೈತರಿಗೆ ಈಗ ನೀಡಿರುವ ವೈಜ್ಞಾನಿಕ ಬೆಲೆ ಮೋಸದಿಂದ ಕೂಡಿದೆ. ಬೆಳೆದ ಬೆಳೆಗೆ ರೈತರೇ ಬೆಲೆ ನಿಗದಿಪಡಿಸುವಾಗಿಲ್ಲ. ಮದ್ಯವರ್ತಿಗಳು, ವ್ಯಾಪಾರಿಗಳು ಅಗ್ಗದ ದರದಲ್ಲಿ ಖರೀದಿ ಮಾಡಿ ಗ್ರಾಹಕರಿಗೆ ತಾವು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ರೈತರು ಒಕ್ಕಲುತನವನ್ನು ಬಿಟ್ಟು ದೂರದ ಊರುಗಳಿಗೆ ಗುಳೆ ಹೋಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ದೇಶದಲ್ಲಿ ಬೀಜ ಪದ್ಧತಿ ಬದಲಾಗಿದ್ದರಿಂದ ರೈತರು ದುಬಾರಿ ಬೀಜ, ಗೊಬ್ಬರ, ಕ್ರಿಮಿನಾಶಕಗಳನ್ನು ಖರೀದಿಸಿ ಸಮರ್ಪಕ ಬೆಳೆ ಬರದೆ ಸಾಲಕ್ಕೆ ಗುರಿಯಾಗಿ ಆತ್ಮಹತ್ಯಗೆ ಶರಣಾಗುತ್ತಿದ್ದಾರೆ. ಈ ಪದ್ಧತಿ ಬದಲಾಗಬೇಕು, ಬೀತ್ತನೆ ಬೀಜಗಳನ್ನು ಸ್ವತಃ ರೈತರೇ ಸಂಗ್ರಹ ಮಾಡಿಕೊಳ್ಳುವಂತಾಗಬೇಕು. ರೈತರಿಗೆ ಮೋಸ ಮಾಡುವ ಬೀಜ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಂದಾಗ ರೈತರ ಬದುಕು ಹಸನಾಗಲು ಸಾಧ್ಯ ಎಂದರು.
ಆರೋಗ್ಯದ ಮೇಲೆ ದುಷ್ಪರಿಣಾಮ: ಕಲಬೆರಕೆ ಆಹಾರ ಧಾನ್ಯ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗುತ್ತಿದ್ದು ಆರೋಗ್ಯವಂತರಾಗಿ ಜೀವನ ಸಾಗಿಸುವುದು ದುಸ್ತರವಾಗಿದೆ. ಮನುಷ್ಯನ ದೇಹದ ಮೇಲೆ ದುಷ್ಪರಿಣಾಮಗಳಾಗುತ್ತವೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹಾಲ್ವಿ ಸಂಸ್ಥಾನಮಠದ ಅಭಿನವ ಮಹಾಂತ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಮಸ್ಕಿ ರುದ್ರಮುನಿದೇವರು, ಮರಿ ಸಿದ್ದಲಿಂಗ ಶಿವಾಚಾರ್ಯರು ರೌಡಕುಂದಾ, ಸಿದ್ದಲಿಂಗ ಶಿವಾಚಾರ್ಯರು ಸಿಂಧನೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಸಿಂಧನೂರು ಉದ್ಘಾಟಿಸಿದರು.
ಸನ್ಮಾನ: ಜೀವಮಾನ ಸೇವೆಗಾಗಿ ಶ್ರೀಗೌರವ ರಕ್ಷೆಯನ್ನು ಸಂಗಯ್ಯ ತಾತ ಸರಗಣಾಧೀಶ್ವರ ಮಠ ಸಿಂಧನೂರು, ಅಮರೇಗೌಡ ಮಟ್ಟೂರು ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆಯೋಜನೆ ಮುದಗಲ್ ಮಹಾಂತಸ್ವಾಮೀಜಿ ಮಾಡಿದ್ದರು. ಬೀರಪ್ಪ ಶಂಭೂಜಿ ಕಾರ್ಯಕ್ರಮ ನಿರೂಪಿಸಿದರು.