ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಖಾತೆಯಲ್ಲೂ ಅಸಮಾನತೆ ಕರಿ ನೆರಳು

Rashmi Kasaragodu
Updated On : 21 May 2013, 12:19 pm

ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 20
ಅಭಿವೃದ್ಧಿಯ ಎಲ್ಲ ರಂಗಗಳಲ್ಲಿ ತೀವ್ರ ಅಲಕ್ಷಕ್ಕೆ ಒಳಗಾಗಿರುವ ಹೈದರಾಬಾದ್ ಕರ್ನಾಟಕ ಇದೀಗ ಸಿದ್ದರಾಮಯ್ಯ ಸಂಪುಟದ ಖಾತೆ ಹಂಚಿಕೆಯಲ್ಲಿಯೂ ಅವಗಣನೆಗೆ ಗುರಿಯಾಗಿದೆ.
  ಮಂತ್ರಿಗಿರಿಯಲ್ಲಿ ಪವರ್‌ಫುಲ್ ಎಂದು ಗಣಿಸಲಾಗಿರುವ ಕಂದಾಯ, ಸಾರಿಗೆ, ಗೃಹ, ವಸತಿ, ಆರೋಗ್ಯ, ಉನ್ನತ ಶಿಕ್ಷಣ, ಪ್ರಾಥಮಿಕ- ಪ್ರೌಢ ಶಿಕ್ಷಣ, ಗ್ರಾಮೀಣಾಭಿವೃದ್ಧಿ- ಪಂಚಾಯತ್ ರಾಜ್, ಕೃಷಿ, ಅಬಕಾರಿ, ಜಲಸಂಪನ್ಮೂಲದಂತಹ ಖಾತೆಗಳು ಹಳೆ ಮೈಸೂರು, ಮುಂಬೈ ಕರ್ನಾಟಕ ಹಾಗೂ ಕರಾವಳಿ ಭಾಗ ಪ್ರತಿನಿಧಿಸುವ ನಾಯಕರ ಪಾಲಾಗಿವೆ.
  ಈ ಬೆಳವಣಿಗೆಯಲ್ಲಿ ಸಹಜವಾಗಿಯೇ ಹಿಂದುಳಿದ ಹೈ-ಕ ನೆಲದ ಅರ್ಧ ಡಜನ್ ಜಿಲ್ಲೆಗಳ 1 ಕೋಟಿಗೂ ಅಧಿಕ ಜನರ ಪ್ರತಿನಿಧಿಗಳಾಗಿ ಸಂಪುಟದಲ್ಲಿರುವ ನಾಲ್ವರು ಮಂತ್ರಿಗಳಿಗೆ (ಇಬ್ಬರು ಕ್ಯಾಬಿನೆಟ್, ಇಬ್ಬರು ರಾಜ್ಯ ಸಚಿವರು) ಸಹಜ ನ್ಯಾಯ ದೊರಕಿಲ್ಲ.
ನಾಮ್ ಕೆ ವಾಸ್ತೆ ಖಾತೆಗಳು: ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಹೈ-ಕ ಜನನಾಯಕರಿಗೆ ಪ್ರಗತಿಪರ, ಮೂಲ ಸೌಕರ್ಯ ಸೃಷ್ಟಿಸುವಲ್ಲಿ ನೆರವಾಗುವಂತಹ ಪವರ್‌ಫುಲ್ ಖಾತೆಗಳು ದೊರಕಿಲ್ಲ, ಬದಲಾಗಿ ನಗಣ್ಯ, ನಾಮ್ ಕೆ ವಾಸ್ತೆ(ಹೆಸರಿಗೆ ಮಾತ್ರ) ಎಂಬಂತಿರುವ ಖಾತೆಗಳನ್ನು ಇಲ್ಲಿನ ಶಾಸಕರಿಗೆ ನೀಡಿ ಕೈ ತೊಳೆದುಕೊಳ್ಳಲಾಗಿದೆ.
  6 ಬಾರಿ ಶಾಸಕರಾಗಿರುವ ಗುಲ್ಬರ್ಗ(ಉ)ದ ಖಮರುಲ್ ಇಸ್ಲಾಂ ಅವರಿಗೆ ವಕ್ಫ್, ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳ ಖಾತೆ ನೀಡಲ್ಪಟ್ಟರೆ, ಮೊದಲ ಮಂತ್ರಿಗಿರಿ ಯೋಗ ಕೂಡಿ ಬಂದಿರುವ ಸೇಡಂನ ಡಾ. ಶರಣಪ್ರಕಾಶರಿಗೆ ವೈದ್ಯಕೀಯ ಶಿಕ್ಷಣ ಖಾತೆ ಜವಾಬ್ದಾರಿ ದೊರಕಿದೆ.
  ಇನ್ನು ಯಾದಗಿರಿ ಜಿಲ್ಲೆ ಗುರುಮಠಕಲ್‌ನ ಚಿಂಚನಸೂರ್ ಅವರಿಗೆ ಜವಳಿ, ಬಂದರು- ಒಳನಾಡು ಸಾರಿಗೆ ಖಾತೆ ನೀಡಲ್ಪಟ್ಟರೆ, ಕನಕಗಿರಿ ಶಾಸಕ ಶಿವರಾಜ ತಂಗಡಗಿ ಇವರಿಗೆ ಸಣ್ಣ ನೀರಾವರಿ ಖಾತೆ ನೀಡಲಾಗಿದೆ.
  ರಸ್ತೆ, ಆರೋಗ್ಯ, ಶಿಕ್ಷಣದಲ್ಲಿ ಹೈ-ಕ ನೆಲ ಸದಾಕಾಲ ಹಿಂದೆ. ಅನೇಕ ಐತಿಹಾಸಿಕ ಕಾರಣಗಳು ಇದರ ಹಿಂದಿವೆ. ಲೋಕೋಪಯೋಗಿ, ಆರೋಗ್ಯ, ಪ್ರಾಥಮಿಕ- ಫ್ರೌಢ ಶಿಕ್ಷಣ, ವಸತಿಯಂತಹ ಪವರ್‌ಫುಲ್ ಹಾಗೂ ಪ್ರಗತಿಪರ ಕೆಲಸಗಳನ್ನು ಹೆಚ್ಚು ಮಾಡಲು ಅವಕಾಶವಿರುವಂತಹ ಖಾತೆಗಳನ್ನು ಇಲ್ಲಿನವರಿಗೆ ಯಾಕೆ ನೀಡಲಿಲ್ಲ ಎಂಬುದೇ ಈಗಿನ ಪ್ರಶ್ನೆ.
ಯಾಕೆ ಈ ಕಡೆಗಣನೆ?: 25 ಅಸೆಂಬ್ಲಿ ಸ್ಥಾನಗಳ ಪೈಕಿ 19ರಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಈ ಭಾಗದ ಮತದಾರರು ಕೈ ಹಿಡಿದಿದ್ದಾರೆ. ಈ ಸಂಗತಿಯನ್ನು ವರಿಷ್ಠರು ಅರಿತರೂ ಖಾತೆ ಹಂಚುವಾಗಿನ ಅಲಕ್ಷತನ ಎಂದಿನಂತೆ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದದ್ದು ಇಲ್ಲಿನ ಜನತೆಗೆ ಬೇಸರ ತರಿಸಿದೆ.
  ಬಿಜೆಪಿ ಸರ್ಕಾರದಲ್ಲಿಯೂ ಹೈ-ಕ ಭಾಗದ ಸಚಿವರಿಗೆ ದುರ್ಬಲ ಖಾತೆಗಳನ್ನೇ ನೀಡಲಾಗಿತ್ತು. ಅದೇ ನೀತಿ ಕಾಂಗ್ರೆಸ್ ಸರ್ಕಾರವೂ ಮುಂದುವರಿಸಿಕೊಂಡು ಹೊರಟಿರುವುದು ದುರದೃಷ್ಟಕರ ವಿಚಾರ ಎಂದು ಇಲ್ಲಿನ ಪ್ರಜ್ಞಾವಂತರು ಚರ್ಚಿಸುತ್ತಿದ್ದಾರೆ.
ವೈದ್ಯಕೀಯ ಶಿಕ್ಷಣ- ಈ ಭಾಗಕ್ಕೆ ಪ್ರಯೋಜನವಿಲ್ಲ: ಸೇಡಂನ ಡಾ. ಶರಣಪ್ರಕಾಶರಿಗೆ ದೊರಕಿರುವ ವೈದ್ಯಕೀಯ ಶಿಕ್ಷಣ ಸಚಿವಾಲಯದಿಂದ ಹಿಂದುಳಿದ ಈ ನೆಲದಲ್ಲಿ ನೇರವಾಗಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶಗಳಿಲ್ಲ. ಈ ಖಾತೆಯಲ್ಲಿ ಕೆಲಸ ಮಾಡಲು ರಾಜ್ಯವ್ಯಾಪಿ ವ್ಯಾಪ್ತಿ ಇದೆ. ವೈದ್ಯಕೀಯ ಶಿಕ್ಷಣದಲ್ಲಿನ ಸೀಟು ಹಂಚಿಕೆ, ಸಿಇಟಿ ಇತ್ಯಾದಿ ಸಂಗತಿಗಳನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಈ ಖಾತೆ ಹೊಣೆ ಹೊತ್ತ ಸಚಿವರು ಕೆಲಸ ಮಾಡಬೇಕಾಗುತ್ತದಷ್ಟೆ.
  ಈ ಖಾತೆಗೆ ಹಿಂದುಳಿದ ನೆಲದ ಜನನಾಯಕರಿಗಿಂತ ಅನ್ಯ ಪ್ರದೇಶದವರಿದ್ದರೆ ಉತ್ತಮವಾಗಿರುತ್ತಿತ್ತು. ಇದಕ್ಕೆ ಬದಲಾಗಿ ಜಲ ಸಂಪನ್ಮೂಲ, ಸಣ್ಣ ನೀರಾವರಿ, ಕೃಷಿ, ಕೈಗಾರಿಕೆ, ಮೂಲ ಸೌಕರ್ಯದಂತಹ ಖಾತೆಗಳು ಇಂತಹ ಯುವ ಮಂತ್ರಿಗಳಿಗೆ ನೀಡಿದ್ದರೆ ಹಿಂದುಳಿದ ನೆಲದಲ್ಲಿ ತುಸು ಪ್ರಗತಿಯಾದರೂ ಕಾಣಲು ಅವಕಾಶವಿತ್ತು ಎಂಬುದು ಜನರ ಅಭಿಪ್ರಾಯ.
'ಪೌರಾಡಳಿತ'ವೂ ಅಷ್ಟಕ್ಕಷ್ಟೆ: ಇನ್ನು 2ನೇ ಬಾರಿಗೆ ಮಂತ್ರಿಗಿರಿ ಯೋಗ ಹೊಂದಿರುವ ಖಮರುಲ್ ಇಸ್ಲಾಂರಿಗೂ ಸಿಕ್ಕಿರುವ ಖಾತೆಗಳಲ್ಲಿ ಈ ನೆಲದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವಂತಹ ಕಾರ್ಯ, ಯೋಜನೆ ರೂಪಿಸುವ ಅವಕಾಶಗಳು ಅಷ್ಟಕ್ಕಷ್ಟೆ. ಹೆಚ್ಚಿನ ವಕ್ಫ್ ಆಸ್ತಿ ಪರಭಾರೆಯಾಗಿರುವ ಹೈ-ಕ ನೆಲದಲ್ಲಿ ಆ ಸಂಗತಿಯೇ ಜಟಿಲ ಸಮಸ್ಯೆಯಾಗಿದೆ. ಅದಕ್ಕೆ ಖಮರುಲ್ ಅದೆಷ್ಟರ ಮಟ್ಟಿಗೆ ಪರಿಹಾರ ಕಾಣುತ್ತಾರೋ, ಪೌರಾಡಳಿತ, ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಕೆಲಸಕ್ಕೆ ಅಲ್ಪ ಅವಕಾಶವಿದ್ದದ್ದೇ ಈಗಿನ ಸಮಾಧಾನ.
  ಕನಕಗಿರಿಯ ಶಿವರಾಜ ತಂಗಡಗಿಯವರ ಸಣ್ಣ ನೀರಾವರಿಯಲ್ಲಿ ಸಾಧನೆಗೆ ಅವಕಾಶಗಳಿದ್ದರೂ ಇವರು ರಾಜ್ಯ ಮಂತ್ರಿಸ್ಥಾನದಲ್ಲಿದ್ದಾರೆ. ಹೀಗಾಗಿ ಈ ರಂಗದಲ್ಲಿ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವುದು ಕಷ್ಟಸಾಧ್ಯ. ಅದರಲ್ಲೂ ಇವರು ಮೊದಲ ಬಾರಿ ಮಂತ್ರಿ. ಹೀಗಾಗಿ ಗಟ್ಟಿತನದ ನಿರ್ಣಯಗಳು ಹೊರಬೀಳುವುದು ಶಂಕಾಸ್ಪದ.
ಚಿಂಚನಸೂರ್ ಖಾತೆ- ಈಗಲೇ ಚರ್ಚಿಸಲಾಗದು: ಇನ್ನು ಕೃಷ್ಣ ಸಂಪುಟದಲ್ಲಿ ಸಪ್ತಖಾತೆ ನಿರ್ವಹಿಸಿರುವ ಅನುಭವಿ ಗುರುಮಠಕಲ್ ಶಾಸಕ ಬಾಬೂರಾವ ಚಿಂಚನಸೂರ್ ಅವರಿಗೆ ಜವಳಿ, ಬಂದರು, ಒಳನಾಡು ಸಾರಿಗೆ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಈ ಖಾತೆಯಲ್ಲಿ ಅದೆಂತಹ ಕೆಲಸಗಳಿಗೆ ಆದ್ಯತೆ ನೀಡಿ ಈ ನೆಲಕ್ಕೆ ಕೊಡುಗೆ ನೀಡುವರೋ ಈಗಲೇ ಚರ್ಚಿಸಲಾಗದು.
  ಕೈ ಹಿಡಿದವರ ನೆಲದಿಂದ ಗೆದ್ದು ಬಂದಿರುವ 19 ಜನನಾಯಕರಲ್ಲಿ ಕೇವಲ 6 ಶಾಸಕರಿಗೆ ಮಾತ್ರ ಮಂತ್ರಿಗಿರಿ ನೀಡಿದ್ದರಿಂದ ಈಗಾಗಲೇ ಹೈ-ಕ ಮಂದಿ ಸಿಟ್ಟಿಗೆದ್ದಿದ್ದಾರೆ. ಇದೀಗ ಖಾತೆ ಹಂಚಿಕೆಯಲ್ಲಿಯೂ ಅನ್ಯಾಯವಾಗಿರುವುದು ಅವರನ್ನು ಇನ್ನೂ ಕೋಪಿಸಿಕೊಳ್ಳುವಂತೆ ಮಾಡಿದೆ. ಸಚಿವರಾದವರ ಹೆಗಲೇರಿರುವ ದುರ್ಬಲ ಖಾತೆಗಳನ್ನು ಕಂಡು ಈ ಅನ್ಯಾಯ ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement