ಜಿಲ್ಲೆಗೆ ಅನ್ಯಾಯ: ಬಾಳಪ್ಪ
ಸಿಂಧನೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೂತನ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಶಾಸಕರಿಗೂ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯ ರಾಜ್ಯ ಸಂಚಾಲಕ ಕೆ.ಬಾಳಪ್ಪ ಟೀಕಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಜಿಲ್ಲೆಯಲ್ಲಿ 4 ಬಾರಿ ಸಂಸದರಾಗಿ, ಒಂದು ಬಾರಿ ಶಾಸಕರಾದ ವೆಂಕಟೇಶ ನಾಯಕ ಅವರಿಗಾಗಲಿ, 4ನೇ ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಅವರಿಗಾಗಲಿ ಸಚಿವ ಸ್ಥಾನ ನೀಡಬೇಕಾಗಿತ್ತು. ಕೆಲ ಸುದ್ದಿಮಾಧ್ಯಮಗಳಲ್ಲಿ ಇವರಿಬ್ಬರ ಹೆಸರು ಪ್ರಕಟವಾದರೂ ಕೊನೆ ಗಳಿಗೆಯಲ್ಲಿ ಹೆಸರು ಕಾಣೆಯಾಗಿದ್ದು ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದೆ.
ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಕುಖ್ಯಾತಿ ಹೊಂದಿರುವುದರಿಂದ ಅಭಿವೃದ್ಧಿ ದೃಷ್ಟಿಯಿಂದಲಾದರೂ ಸಚಿವ ಸ್ಥಾನ ಕಲ್ಪಿಸಬೇಕಾಗಿತ್ತು ಎಂದು ಅ.ಕ.ಕ.ಚ.ದ ಜಿಲ್ಲಾ ಉಪಾಧ್ಯಕ್ಷ ಎಂ.ಹರೀಶ, ರಡ್ಡೆಪ್ಪ ತೊಗೇಮನಿ, ಹಸನ್ ಟೇಲರ್, ತಿಮ್ಮಣ್ಣ ಯಾದವ, ನಾಗೇಶ ಜಾಲಗಾರ, ವೆಂಕಟೇಶ ಕಟ್ಟಿಮನಿ ಮತ್ತಿತರರು ತಿಳಿಸಿದ್ದಾರೆ.