ಬಾದರ್ಲಿಗೆ ಬರಲಿಲ್ಲ ಸಚಿವ ಯೋಗ
ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 20
ಸಿಂಧನೂರು ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಬಸವಂತ್ರಾಯಗೌಡರನ್ನು ಹೊರತುಪಡಿಸಿದರೆ ಆಯ್ಕೆಯಾದ ಶಾಸಕರೆಲ್ಲರೂ ವಿರೋಧ ಪಕ್ಷದ ಸ್ಥಾನದಲ್ಲಿಯೇ ಕುಳಿತಿದ್ದರು. ಅದೃಷ್ಟವೆಂಬಂತೆ ಈ ಬಾರಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಶಾಸಕರಾಗಿ ಹಂಪನಗೌಡ ಬಾದರ್ಲಿ ಆಯ್ಕೆಯಾದರೂ ಸಚಿವರಾಗುವ ಯೋಗ ಬಾರದೇ ಇದ್ದದ್ದು ಕ್ಷೇತ್ರದ ಮತದಾರರಿಗೆ ನಿರಾಸೆ ಮೂಡಿಸಿದೆ.
ಸ್ವಾತಂತ್ರ್ಯ ನಂತರ ಸಿಂಧನೂರು ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇದುವರೆಗೂ ಸಚಿವ ಸ್ಥಾನ ದೊರೆತಿಲ್ಲ. ಮಾಜಿ ಶಾಸಕರಾದ ಎಂ.ಮಲ್ಲಪ್ಪ ಹಾಗೂ ಕೆ.ವಿರುಪಾಕ್ಷಪ್ಪ ಕೇವಲ ಕಾಡಾ ಅಧ್ಯಕ್ಷರಾಗಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕನಕಗಿರಿ ಕ್ಷೇತ್ರದಿಂದ ಆಯ್ಕೆಯಾದ ಶಿವರಾಜ ತಂಗಡಗಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ನೆಗೆದರೂ ಅದೃಷ್ಟ ದೇವತೆ ಅವರನ್ನು ಹಿಂಬಾಲಿಸಿದಳು.
ದುರದೃಷ್ಟಕರ: ಆದರೆ ಇಡೀ ಜಿಲ್ಲೆಯಲ್ಲಿ ಸಿಂಧನೂರು ತಾಲೂಕಿನಲ್ಲಿ ಕಾಂಗ್ರೆಸ್ಸನ್ನು ಬೇರುಮಟ್ಟದಲ್ಲಿ ಕಟ್ಟಿ ಗ್ರಾಪಂ.ನಿಂದ ಜಿಪಂ.ವರೆಗೆ ಹಾಗೂ ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ 18 ಸ್ಥಾನಗಳನ್ನು ಬಾದರ್ಲಿ ಹಂಪನಗೌಡರ ನೇತೃತ್ವದಲ್ಲಿ ಗೆಲ್ಲುವ ಮೂಲಕ ಇತಿಹಾಸವನ್ನೇ ನಿರ್ಮಿಸಿದರು. ಆದರೆ ಈ ಯಾವ ಅಂಶಗಳು ಹೈಕಮಾಂಡ್ ಪರಿಗಣಿಸದಿರುವುದು ದುರದೃಷ್ಟಕರ.
ಜನತೆ ಅಸಮಾಧಾನ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂದು ಕೆಪಿಸಿಸಿ ಹಾಗೂ ಎಐಸಿಸಿಗೆ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಎಐಸಿಸಿ ಉಪಾಧ್ಯಕ್ಷ ರಾಹುಲಗಾಂಧಿ ರಾಜ್ಯದ ಚುನಾವಣಾ ಪ್ರಚಾರ ಬಹಿರಂಗ ಸಭೆಯನ್ನು ಸಿಂಧನೂರಿನಲ್ಲಿ ಪ್ರಥಮವಾಗಿ ಆರಂಭಿಸಿದರು. ಇದಲ್ಲದೇ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಸಹ ಬಂದಾಗ ಕ್ಷೇತ್ರದ ಜನತೆ ಬಾದರ್ಲಿಯನ್ನ ಆರಿಸಿ ಕಳುಹಿಸಿದರೆ ಮಂತ್ರಿ ಮಾಡುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೆ ಆ ಎಲ್ಲ ಭರವಸೆ, ಮನವಿಗಳು ಹುಸಿಯಾಗಿರುವುದಕ್ಕೆ ಕ್ಷೇತ್ರದ ಜನತೆ ತೀವ್ರ ಅಸಮಾಧಾನಗೊಂಡಿದೆ. ಈ ಬಗ್ಗೆ ಯುವಕಾಂಗ್ರೆಸ್‌ನ ಕೊಪ್ಪಳ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದಾಗ “ÔæçOÚÈÚáÛMsé ಹಂಪನಗೌಡರ ಬಗ್ಗೆ ಸಂಪೂರ್ಣ ವಿಶ್ವಾಸವನ್ನು ಹೊಂದಿದೆ. 2ನೇ ಕಂತಿನ ಮಂತ್ರಿ ಮಂಡಲದ ವಿಸ್ತರಣೆಯಲ್ಲಿ ಬಾದರ್ಲಿಯವರಿಗೆ ಅವಕಾಶ ಖಂಡಿತವಾಗಿಯೂ ÒVÚß}Ú¡¥æ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.