ಬೀಜದಂತೆ ಮೊಳಕೆ, ಮೊಳಕೆಯಿಂದಲೇ ಗಳಿಕೆ
ಯಾದಗಿರಿ: ಬೀಜದಂತೆ ಮೊಳಕೆ, ಮೊಳಕೆಯಿಂದಲೇ ಗಳಿಕೆ. ಬೀಜಕ್ಕಾಗಿ ಪರದಾಟ ಬೇಡ ಬೀಜದಲ್ಲಿ ಸ್ವಾಲಂಬನೆ ಸಾಧಿಸಬೇಕೆಂದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜಕುಮಾರ ರೈತರಿಗೆ ಕರೆ ನೀಡಿದರು.
ಅವರು ಕೃಷಿ ಇಲಾಖೆ ಯಾದಗಿರಿ, ರೈತ ಸಂಪರ್ಕ ಕೇಂದ್ರ ಸೈದಾಪುರ ಹಾಗೂ ಸಿಂಜೆಂಟಾ ಕಂಪನಿ ಸಹಯೋಗದೊಂದಿಗೆ ಸೈದಾಪುರ ಹೋಬಳಿಯ ಕ್ಯಾತನಾಳ, ಕಡೇಚೂರ, ಬೊಮ್ಮರಲದೊಡ್ಡಿ, ಮಾವಿನಹಳ್ಳಿ ಮತ್ತು ಚಂದಾಪುರ ಗ್ರಾಮಗಳಲ್ಲಿ ಬೀಜೋಪಚಾರ ಅಂದೋಲನ ಮತ್ತು ಭೂ- ಚೇತನ ಯೋಜನೆಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮುಂಗಾರು ಬೆಳೆಗಳಾದ ಹೆಸರು, ತೊಗರಿ, ಉದ್ದು, ಸೂರ್ಯಕಾಂತಿ ಬೆಳೆಗಳಿಗೆ ಬೀಜದಿಂದ ಬರುವ ರೋಗ ಮತ್ತು ಕೀಟಗಳ ಹತೋಟಿಗಾಗಿ ಟ್ರೈಕೋಡರ್ಮ ಜೈವಿಕ ಶೀಲಿಂದ್ರ ನಾಶಕದ ಬೀಜೋಪಚಾರ ಮಾಡುವುದರಿಂದ ತೊಗರಿ ಬೆಳೆಗಳಿಗೆ ಬರುವ ನೇಟೆ ರೋಗವನ್ನು ಸಂಪೂರ್ಣವಾಗಿ ಹತೋಟಿ ಮಾಡಬಹುದು.
ರೈಜೋಬಿಯಂನಂತಹ ಜೈವಿಕ ಗೊಬ್ಬರಗಳ ಬೀಜೋಪಚಾರದಿಂದ ಬೆಳೆಗಳಿಗೆ ಕೊಡಬೇಕಾದ ಶೇ.50 ರಷ್ಟು ಯೂರಿಯ ಗೊಬ್ಬರವನ್ನು ಕಡಿಮೆ ಮಾಡಬಹುದೆಂದು ಪ್ರಾಯೋಗಿಕವಾಗಿ ತೋರಿಸಿದರು. ಬಳಿಚಕ್ರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ನೀಲಾ ನಾಯ್ಕ ರೈತರಿಗೆ ಬೀಜೋಪಚಾರದ ಅರಿವು ಮೂಡಿಸಿದರು.