'ಸಹಕಾರಿ ಕ್ಷೇತ್ರಕ್ಕೆ ಸಿಂಧನೂರು ಸ್ಫೂರ್ತಿ'
ಕ.ಪ್ರ. ವಾರ್ತೆ, ಸಿಂಧನೂರು, ಮೇ 20
ಸೌಹಾರ್ದ ಸಂಸ್ಥೆಗಳಿಂದ ವಿವಿಧೋದ್ದೇಶ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ನಗರದಲ್ಲಿ ಸೋಮವಾರ ಆಸರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, 2001ರಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸೌಹಾರ್ದ ಕಾಯಿದೆ ಜಾರಿಗೆ ಬಂದ ಮೇಲೆ ಅನೇಕ ಮಹತ್ವದ ಹಾಗೂ ಗಮನಾರ್ಹ ಬದಲಾವಣೆಗಳಾದವು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಂಸ್ಥೆಗಳು ಮುಚ್ಚುವ ಹಂತಕ್ಕೆ ಬಂದಿದ್ದವು. ಸೌಹಾರ್ದದಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶವಿಲ್ಲ. ಸಿಂಧನೂರು ತಾಲೂಕು 90ರ ದಶಕದಿಂದ ಸಹಕಾರಿ ಕ್ಷೇತ್ರದಲ್ಲಿ ಭಾರಿ ಬೆಳವಣಿಗೆ ಕಾಣುತ್ತಲಿದೆ. ಸಹಕಾರಿ ಕ್ಷೇತ್ರಕ್ಕೆ ಸಿಂಧನೂರು ಸ್ಫೂರ್ತಿಯಾಗಿದೆ ಎಂದರು.
ಸಂಘಗಳು ಲಾಭದಾಯಕ: ಸೌಹಾರ್ದ ಬ್ಯಾಂಕುಗಳು, ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗಳು ಕೇವಲ ಹಣಕಾಸಿನ ವ್ಯವಹಾರಕ್ಕೆ ಮಾತ್ರ ಸೀಮಿತವಲ್ಲ. ಕೊಪ್ಪದಲ್ಲಿ ಸಹಕಾರಿ ಸಾರಿಗೆ ಸಂಸ್ಥೆ 80ಕ್ಕೂ ಹೆಚ್ಚು ವಾಹನಗಳನ್ನು ನಡೆಸುತ್ತಾ ಮಾದರಿ ಸಂಸ್ಥೆಯಾಗಿ ಬೆಳೆದಿದೆ. ಕೇರಳದಲ್ಲಿ ಉಪ್ಪು ಮಾರುವವರ ಸಹಕಾರಿ ಸಂಸ್ಥೆ, ಕೊಚ್ಚಿಯಲ್ಲಿ ಆನೆ ಮಾಲೀಕರ ಸಹಕಾರ ಸಂಘಗಳಿವೆ. ಇದಲ್ಲದೇ ಸಹಕಾರಿ ಸಂಸ್ಥೆಗಳು ಮಾರುಕಟ್ಟೆ, ಹೌಸಿಂಗ್, ಟೂರಿಜಂ, ಶಿಕ್ಷಣ, ಮಹಿಳಾ ಸಂಸ್ಥೆಗಳು, ವಿವಿಧೋದ್ದೇಶ ಯೋಜನೆಯ ಸಂಘಗಳು ಲಾಭದಾಯಕ ಬೆಳವಣಿಗೆಯಲ್ಲಿವೆ. ಇಂತಹ ಸಂಸ್ಥೆಗಳನ್ನು ಸಿಂಧನೂರಿನಲ್ಲಿಯೂ ಕಟ್ಟಬೇಕೆಂದು ಮನವಿ ಮಾಡಿದರು.
ದೇಶದಲ್ಲಿ 36 ಸಾವಿರ ಸಂಸ್ಥೆ: ಸಿಂಧನೂರು ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಬಿ. ರಾಜಶೇಖರ ಮಾತನಾಡಿ, ದೇಶದಲ್ಲಿ 36 ಸಾವಿರ ಸಹಕಾರಿ ಸಂಸ್ಥೆಗಳಿವೆ. ಅದರಲ್ಲಿ 25 ಕೋಟಿ ಸದಸ್ಯರಿರುವರು. ರಾಜ್ಯದ 2,450 ಸೌಹಾರ್ದ ಸಹಕಾರಿ ಸಂಸ್ಥೆಗಳಿದ್ದು, ಅವುಗಳಲ್ಲಿ 800ಕ್ಕೂ ಹೆಚ್ಚು ಬೆಳಗಾವಿ ಜಿಲ್ಲೆಯಲ್ಲಿವೆ. ಗದಗ ಒಂದು ಕಾಲಕ್ಕೆ ಸಹಕಾರಿ ಕ್ಷೇತ್ರದ ಕಾಶಿ ಎನಿಸಿತ್ತು. ಆದರೆ ಈಗ ಹಂಪಿಯಾಗಿದೆ. ಸೌಹಾರ್ದ ಕಾಯಿದೆ ಅಡಿ 18 ಅರ್ಬನ್ ಬ್ಯಾಂಕುಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಂಧನೂರುನಲ್ಲೂ ಇತ್ತೀಚೆಗೆ ಯುವಸಮೂಹ ಸಹಕಾರಿ ಕ್ಷೇತ್ರದೆಡೆ ವಾಲುತ್ತಿರುವುದು ಸಂತದ ಸಂಗತಿ ಎಂದರು.
ಸಾಧಕರಿಗೆ ಸನ್ಮಾನ: ಇದೇ ವೇಳೆ ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತ ಚಿದಾನಂದಪ್ಪ ಅಂಗಡಿ, ಮಾಧ್ಯಮ ಕ್ಷೇತ್ರದಲ್ಲಿ ಶ್ಯಾಂಕುಮಾರ, ಸಮಾಜ ಸೇವಾ ಕ್ಷೇತ್ರದಲ್ಲಿ ನಗರಸಭೆ ಮಾಜಿ ಸದಸ್ಯ ಎಸ್.ಶರಣೇಗೌಡ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸುನೀಲಕುಮಾರ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಎಸ್.ಶರಣೇಗೌಡ ಮಾತನಾಡಿದರು. ನಗರಸಭೆ ಸದಸ್ಯೆ ಮಂಜುಳಾ ಪಾಟೀಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಯಿಯಂತೆ “AÑÚÁæ’¾ÚáÛVÚÆ: ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ತಾಯಿ ಮಗುವಿಗೆ ಆಸರೆಯಾದಂತೆ “AÑÚÁæ’ ಎಂಬ ಹೆಸರಿನಲ್ಲಿ ಆರಂಭವಾದ ಬ್ಯಾಂಕು ದುರ್ಬಲರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಲಿ. ಕೈಯಲ್ಲಿನ ಐದು ಬೆರಳುಗಳಂತೆ ಎಲ್ಲರೂ ಸಹಕಾರಿ ತತ್ವದಡಿ ಕೆಲಸ ಮಾಡಿ ಸಹಕಾರಿ ಸಂಸ್ಥೆಯನ್ನು ಅಭಿವೃದ್ಧಿಪಡಿಸಲಿ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಲಯ್ಯ ಹಿರೇಮಠ ವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ವೈಜನಾಥ ಸಗರಮಠ ನಿರೂಪಿಸಿದರು. ಕೆ.ಗೋಪಾಲಕೃಷ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.