ವಾಣಿಜ್ಯ ಮಳಿಗೆ: ಗೂಡಂಗಡಿ ತೆರವು
ಮುದಗಲ್: ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸರ್ವೆ. ನಂ. 1ರಲ್ಲಿ ಪಟ್ಟಣ ಪಂಚಾಯಿತಿ ಎಸ್ಎಫ್ಸಿ ಅನುದಾನದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವ ಸಲುವಾಗಿ ಆ ಜಾಗದಲ್ಲಿದ್ದ ಡಬ್ಬಾ ಅಂಗಡಿ, ತಟ್ಟಿ ಹೋಟೆಲ್, ಖಾನಾವಳಿಗಳನ್ನು ತೆರವುಗೊಳಿಸಲಾಯಿತು.
ವಾಣಿಜ್ಯ ಮಳಿಗೆ ನಿರ್ಮಿಸುವ ಸಲುವಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಆದೇಶ ನೀಡಲಾಗಿದೆ. ಡಬ್ಬಾ ಅಂಗಡಿ ಮಾಲೀಕರಿಗೆ ತೆರವುಗೊಳಿಸುವಂತೆ ಸೂಚನೆ ನೀಡಿ ಸಾಕಷ್ಟು ಕಾಲಾವಕಾಶ ನೀಡಿದರೂ ತೆರವುಗೊಳಿಸದ ಕಾರಣ ಪಪಂ ಆಡಳಿತಾಧಿಕಾರಿ ಮತ್ತು ತಹಸೀಲ್ದಾರ್ ವಿ.ಜಿ. ಮಹಾಜನ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಬೆಳಗ್ಗೆ 10.30ರಿಂದ ತೆರವುಗೊಳಿಸುವ ಕಾರ್ಯ ಆರಂಭವಾಗಿದ್ದು, ಎಲ್ಲ ಅಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿಕಾರರಿಗೆ ತಿಳಿಸಿದರು. ಕೆಲ ಡಬ್ಬಾ ಅಂಗಡಿಕಾರರು ಇಲ್ಲದ ಕಾರಣ ಪಪಂ ಟ್ರ್ಯಾಕ್ಟರ್ದಲ್ಲಿ ಸಿಬ್ಬಂದಿ ಡಬ್ಹಾ ಅಂಗಡಿಗಳನ್ನು ತೆರವುಗೊಳಿಸಿದರು.
ಮನವಿ: ಪಪಂ ಸಿಬ್ಬಂದಿ, ಅಧಿಕಾರಿಗಳು, ತಹಸೀಲ್ದಾರರು ಅಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ಅಂಗಡಿ ಮಾಲೀಕರು ಇನ್ನು ಎರಡು ದಿನಗಳ ಕಾಲಾವಕಾಸ ನೀಡುವಂತೆ ತಹಸೀಲ್ದಾರರಲ್ಲಿ ಮನವಿ ಮಾಡಿದರು. ಆದರೆ ಸಾಕಷ್ಟು ದಿನ ಕಾಲಾವಕಾಶ ನೀಡಿದ್ದರೂ ತೆರವು ಮಾಡಿರಲಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ತೆರವುಗೊಳಿಸದೆ ಬಿಡುವುದಿಲ್ಲ ಎಂದು ತಿಳಿಸಿದ್ದರಿಂದ ವಿಧಿ ಇಲ್ಲದೆ ಖಾಲಿ ಮಾಡಬೇಕಾಯಿತು.
ಬಿಗಿ ಬಂದೋಬಸ್ತ್: ಡಬ್ಬಾ ಅಂಗಡಿ, ತಟ್ಟಿ ಹೋಟೆಲ್ಗಳನ್ನು ತೆರವುಗೊಳಿಸಲು ಪಪಂ ಅಧಿಕಾರಿಗಳು ಮುಂದಾಗಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ, ಪಿಎಸ್ಐ ಹೊಸಮನಿ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.