'ಶಿಷ್ಯವೇತನ ನೀಡಿಕೆಯಲ್ಲಿ ಶೇ.100 ಪ್ರಗತಿ'
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 21
ಜಿಲ್ಲೆಯಲ್ಲಿ ಲಿಂಗಸ್ಗೂರು ತಾಲೂಕಿನ ಶಾಲಾ- ಕಾಲೇಜುಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ಶಿಷ್ಯ ವೇತನದ ಕ್ರೀಯಾಯೋಜನೆ ಪ್ರಕಾರ ಶೇ.100ರಷ್ಟು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಎಲ್.ಬಿ. ಸಜ್ಜನ್ ಸ್ಪಷ್ಟಪಡಿಸಿದರು.
ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿ, ಸರ್ಕಾರದ ಆದೇಶದಂತೆ ಪ್ರತಿ ತಿಂಗಳು ಮೆಟ್ರಿಕ್ ಪೂರ್ವ ಪ್ರತಿ ವಿದ್ಯಾರ್ಥಿಗೆ 800, ಕಾಲೇಜು ವಿದ್ಯಾರ್ಥಿಗೆ 850 ಹಾಗೂ ಆಶ್ರಮ ಶಾಲೆ ವಿದ್ಯಾರ್ಥಿಗೆ 500ನಂತೆ ಶಿಷ್ಯ ವೇತನ ನೀಡಲಾಗುತ್ತಿದೆ. ಕಳೆದ 2012- 13ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿಯ ಒಟ್ಟು 6,388 ವಿದ್ಯಾರ್ಥಿಗಳಿಗೆ 20,83,250 ಮತ್ತು ಪರಿಶಿಷ್ಟ ಪಂಗಡದ ಒಟ್ಟು 4,272 ವಿದ್ಯಾರ್ಥಿಗಳಿಗೆ 12,98,000 ಶಿಷ್ಯವೇತನ ನೀಡಲಾಗಿದೆ. ಅದರಂತೆ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ಒಟ್ಟು 1015 ವಿದ್ಯಾರ್ಥಿಗಳಿಗೆ 80,73,712 ಮತ್ತು ಪರಿಶಿಷ್ಟ ಪಂಗಡದ ಒಟ್ಟು 1,024 ವಿದ್ಯಾರ್ಥಿಗಳಿಗೆ 48,24,162 ಶಿಷ್ಯ ವೇತನ ನೀಡಲಾಗಿದೆ ಎಂದರು.
ಬೈಯೋ ಮೆಟ್ರಿಕ್ ಪದ್ಧತಿ: ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೊರತು ಪಡಿಸಿ 14 ವಸತಿ ನಿಲಯಗಳಿಗೆ ಬೈಯೋ ಮೆಟ್ರಿಕ್ ಪದ್ಧತಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಗುಲ್ಬರ್ಗ ವಿಭಾಗೀಯ ಮಟ್ಟದಲ್ಲಿ ಹಾಸ್ಟೆಲ್ಗಳ ಸುವ್ಯವಸ್ಥೆ ಹಾಗೂ ನಿರ್ವಹಣೆ ಕುರಿತು ಜೂ. 6ರಂದು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಪ್ರವೇಶಕ್ಕೆ ಅರ್ಜಿ ಆಹ್ವಾನ: ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಗುರುಗುಂಟಾ, ಲಿಂಗಸ್ಗೂರು, ರೋಡಲಬಂಡಾ, ಮಸ್ಕಿ, ಬಯ್ಯಾಪುರ, ನಾಗಲಾಪೂರ, ಆನೆಹೊಸೂರು, ಹಟ್ಟಿ, ಖೈರವಾಡಗಿ, ಈಚನಾಳ, ಯಲಗಟ್ಟಾ, ಮಾವಿನಬಾವಿ ಗ್ರಾಮಗಳ ಸರಕಾರಿ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳು ಮತ್ತು ಗುರುಗುಂಟಾ, ಮಸ್ಕಿ ಪರಿಶಿಷ್ಟ ವರ್ಗಗಳ ಬಾಲಕಿಯರ ವಸತಿ ನಿಲಯಗಳಲ್ಲಿ ಖಾಲಿ ಸ್ಥಾನಗಳಿಗೆ ವಿದ್ಯಾರ್ಥಿಗಳ ಭರ್ತಿಗೆ ಪ್ರವೇಶ ಕೋರಿ ಅರ್ಜಿ ಕರೆಯಲಾಗಿದೆ. ಲಿಂಗಸ್ಗೂರಿನ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಜೂ.5 ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕೆಂದರು.
ವಾರ್ಡನ್ ಹುದ್ದೆ ಖಾಲಿ: ತಾಲೂಕಿನ ಬಾಲಕರ ವಸತಿ ನಿಲಯ ಲಿಂಗಸ್ಗೂರು, ವೃತ್ತಿಪರ ಕಾಲೇಜು ವಸತಿ ನಿಲಯ ಲಿಂಗಸ್ಗೂರು, ಬಾಲಕರ ವಸತಿ ನಿಲಯ ಗುರುಗುಂಟಾ, ಕಾಲೇಜು ವಸತಿ ನಿಲಯ ಹಟ್ಟಿ, ಆಶಿಹಾಳ ತಾಂಡಾ ಆಶ್ರಮ ಶಾಲೆ ಮುಖ್ಯಗುರು ಹಾಗೂ ಇಬ್ಬರು ಸಹಾಯಕ ಶಿಕ್ಷಕರ ಹುದ್ದೆ ಖಾಲಿಯಿದ್ದು, ಭರ್ತಿಗೆ ಕ್ರಮ ಕೈಗೊಳ್ಳಲಾಗುವುದೆಂದರು.