ಸಂದರ್ಶನ ಮುಂದೂಡಿಕೆ
ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿಯಿದ್ದ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಯಬೇಕಿದ್ದ ಸಂದರ್ಶನವನ್ನು ಮುಂದೂಡಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ. ಈ ಕುರಿತು ವಿವಿಯ ಕುಲಸಚಿವರ ಕಚೇರಿ ಪ್ರಕಟಣೆ ನೀಡಿದ್ದು, ವಿವಿಧ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆಯಬೇಕಿದ್ದ ಸಂದರ್ಶನವನ್ನು ಹೈ.ಕ. ಭಾಗದಲ್ಲಿ 371ನೇ ಕಲಂ(ಜೆ) ಸವಲತ್ತು ಜಾರಿಗೆ ಬರುವ ಹಿನ್ನೆಲೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮೂಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ವಸತಿ ನಿಲಯ; ಅರ್ಜಿ ಆಹ್ವಾನ
ರಾಯಚೂರು: ಮಾನವಿ ಹಾಗೂ ಲಿಂಗಸ್ಗೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಖಾಲಿಯಿರುವ ಬಾಲಕ- ಬಾಲಕಿಯರ ವಿದ್ಯಾರ್ಥಿಗಳ ಸ್ಥಾನಗಳಿಗೆ 2013- 14ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಯಾ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿಗಳನ್ನು ಉಚಿತವಾಗಿ ಪಡೆದು ಜೂ.5ರೊಳಗೆ ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
25ರಂದು ಜಿಪಂ ಕೆಡಿಪಿ ಸಭೆ
ರಾಯಚೂರು: ಇಲ್ಲಿನ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯನ್ನು ಮೇ 25ರಂದು ಕರೆಯಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ಜರುಗಲಿದ್ದು, ಜಿಪಂ ಅಧ್ಯಕ್ಷೆ ಲಲಿತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಜಿಪಂ ಸಿಇಒ ಕಚೇರಿ ತಿಳಿಸಿದೆ.