ಅಧಿಕಾರಿಗಳಿಂದ ರೈತರ ಶೋಷಣೆ; ಶೋಭಾ ಶಂಕರ ಬಾಣಿ ಆರೋಪ
ಜೇವರ್ಗಿ: ತಾಲೂಕಿನ ಇಟಗಾ, ಅಂಕಲಗಾ, ನೆಲೋಗಿ ಸೇರಿದಂತೆ ನದಿ ತೀರದ ಗ್ರಾಮಗಳ ರೈತರ ನೀರಾವರಿ ಪಂಪ್ ಸೆಟ್ನ ವಿದ್ಯುತ್ ಸ್ಥಗಿತಗೊಳಿಸಿ ಜೆಸ್ಕಾಂ ಇಲಾಖೆ ರೈತರನ್ನು ಶೋಷಣೆ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಶಂಕರ ಬಾಣಿ ಆರೋಪಿಸಿದ್ದಾರೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಕುಡಿಯುವ ನೀರಿನ ಅಭಾವದಿಂದ ನದಿ ನೀರನ್ನು ಜಮೀನುಗಳಿಗೆ ನೀರು ಹರಿಸುವಂತೆ ನದಿಯಿಂದ ಸಂಪರ್ಕ ಪಡೆದ ರೈತರ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದರು.
ಕುಡಿಯುವ ನೀರಿನ ಅಭಾವದಿಂದ ನದಿ ಸಂಪರ್ಕ ಪಡೆದ ಪಂಪ್ಸೆಟ್ಗಳು ವಿದ್ಯುತ್ ಸ್ಥಗಿತಗೊಳಿಸಿರಬಹುದು. ಆದರೆ ತಮ್ಮ ಸ್ವಂತ ಜಮೀನುಗಳಲ್ಲಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸ್ವಂತ ತೆರೆದ ಬಾವಿಗಳಿಗೆ ಅಳವಡಿಸಲಾದ ವಿದ್ಯುತ್ ಕೂಡ ಸ್ಥಗಿತಗೊಳಿಸಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಕಿಡಿ ಕಾರಿದ ಅವರು, ರೈತರಿಗೆ ತಮ್ಮ ಸ್ವಂತ ಹೊಲದಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳಿಗೆ ನೀರುಣಿಸಲು ಸಹ ಅಧಿಕಾರಿ ವರ್ಗ ಬಿಡದೇ ರೈತರನ್ನು ವಂಚನೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಈಗೇಕೆ ನೀರು ಬಿಡುತ್ತಿಲ್ಲ?: ಜಮೀನುಗಳಿಗೆ ನೀರು ಬಿಡದಿದ್ದಲ್ಲಿ ಲಕ್ಷಾಂತರ ರು. ಕಬ್ಬು ಮಣ್ಣು ಪಾಲಾಗಲಿದೆ ಎಂಬ ಭಯ ರೈತರಲ್ಲಿ ಮನೆ ಮಾಡಿದೆ. ಅತಿವೃಷ್ಟಿ ಬಂದಾಗ ಹೆಚ್ಚಿನ ನೀರು ಹರಿಸಿ ಹೆಚ್ಚಿನ ಹಾನಿ ತಂದೊಡ್ಡುವ ಮಹಾರಾಷ್ಟ್ರ ಸರ್ಕಾರ ಅತಿವೃಷ್ಟಿಯಿಂದ ಕುಡಿಯುವ ಹನಿ ನೀರಿಗಾಗಿ ಪರಿತಪ್ಪಿಸುತ್ತಿರುವ ನಮ್ಮ ಜನರಿಗೆ ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಬಿಡುವಲ್ಲಿ ಏಕೆ ನೆರವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ನೀರಿನ ಬವಣೆ ಎದುರಿಸುತ್ತಿರುವ ಈ ಭಾಗಕ್ಕೆ ನೀರು ಬಿಡುವಂತೆ ಒತ್ತಾಯಿಸಬೇಕೆಂದು ಬಾಣಿ ಆಗ್ರಹಿಸಿದ್ದಾರೆ. ಕೂಡಲೇ ತಮ್ಮದೇ ಹೊಲಗಳಲ್ಲಿ ನೀರು ಪಡೆಯುತ್ತಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.