ಕಾನೂನು ಅರಿವಿಗೆ ಸಂಚಾರಿ ನ್ಯಾಯಾಲಯ ಸಹಕಾರಿ
ಜೇವರ್ಗಿ: ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ಜಾಥಾ ಸಹಕಾರಿಯಾಗಲಿವೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ಸಂಚಾರಿ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಸ್ಥಳಿಯ ಜೆಎಂಎಫ್ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಸಂಚಾರಿ ನ್ಯಾಯಾಲಯ ತಾಲೂಕಿನಲ್ಲಿ ಸಂಚರಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಗಳಾಗಿ ಜೇವರ್ಗಿ ವಕೀಲರ ಸಂಘದ ಅಧ್ಯಕ್ಷ ಬಿ. ಬಸಣ್ಣ ಆಗಮಿಸಿದ್ದರು. ಸಂಪನ್ಮೂಲ ಭಾಷಣಕಾರರಾಗಿ ರಾಜಕುಮಾರ ಗುತ್ತೇದಾರ ಸಕಾಲ ವಿಷಯದ ಬಗ್ಗೆ, ರೇಣುಕಾದೇವಿ ಕಾಬಾ ಪಿಜಿಆರ್ ಸೆಲ್ ವಿಷಯದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮನೋಜಕುಮಾರ ಗುರಿಕಾರ, ಶಿವಾನಂದ ಹರವಾಳ, ಸುನೀಲಕುಮಾರ, ಮನಿಷಾ ಘಾಟಗೆ, ಈರಣ್ಣ ರಾಜನಾಳ, ಯಂಕಪ್ಪ ಪವಾರ, ಗಂಗಾಬಿಕಾ ಹಿರೇಮಠ, ದೇವಿಂದ್ರ ಹಿಪ್ಪರಗಿ, ಹೊನ್ನೇಶ ಕನಕಗಿರಿ, ರುದ್ರಮುನಿ ಕೆಂಭಾವಿಮಠ, ರುದ್ರಮ್ಮ ಕಲಾಲ, ಲಕ್ಷ್ಮಣ ದೊಡಮನಿ ಪಾಲ್ಗೊಂಡಿದರು. ಧರ್ಮು ರಾಠೋಡ ಸ್ವಾಗತಿಸಿದರು. ರಘುನಾಥ ನರಸಾಳೆ ನಿರೂಪಿಸಿ ವಂದಿಸಿದರು.