ಜಾಗತಿಕರಣದ ಕತ್ತಲು ವಚನದಿಂದ ದೂರ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 22
ವೈದಿಕ ಸಂಸ್ಕೃತಿ ವೈರುದ್ಯಗಳನ್ನು ದಿಕ್ಕರಿಸಿದ ಶರಣರು ಸರಳ ಸುಂದರ ಸಮಾನತೆಯ ಸಂಸ್ಕೃತಿಯನ್ನು ಸಾರಿ ಹೇಳಿದರು. ಇಂದಿನ ಪಾಶ್ಚಾತ್ಯ ಸಂಸ್ಕೃತಿಯ ವಿರುದ್ಧ ವೈಚಾರಿಕ ಕ್ರಾಂತಿಯಾಗಿ ಸಮಾನತೆ ತತ್ವ ಮೈ ತಳೆಯಲು ಶರಣ ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಸಾಹಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ ಶಾಂತವೀರ ಬಿ. ಸುಂಕದ ಹೇಳಿದರು.
ನಗರದ ಮದರ್ ತೆರೆಸಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ನಿವೃತ್ತ ಶಿಕ್ಷಕ ಗುರಣ್ಣ ಆರ್. ಚಟ್ನಳ್ಳಿ ಗಂವಾರ ಸ್ಮರಣಾರ್ಥ ವಿಶ್ವಜ್ಯೋತಿ ಪ್ರತಿಷ್ಠಾನವು ಆಯೋಜಿಸಿದ ಜಾಗತಿಕರಣದ ಕತ್ತಲು ವಚನಸಾಹಿತ್ಯದ ಬೆಳಕು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಳಕಿನಡೆಗೆ ಕೊಂಡೊಯ್ಯುವ ಶಕ್ತಿ: ವಚನಗಳು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಅವು ಎಲ್ಲರ ನಿತ್ಯ ಬದುಕಿನ ದಾರಿ ದೀಪಗಳು. ಜಗತ್ತನ್ನು ಕತ್ತಲಿನಿಂದ ಬೆಳಕಿನಡೆಗೆ ಕೊಂಡೊಯ್ಯುವ ಶಕ್ತಿ ಹೊಂದಿವೆ ಎಂದರು.
ಮಾಜಿ ಶಾಸಕ ಎಂ.ವೈ. ಪಾಟೀಲ್, ತಮ್ಮ ಸ್ವತಂತ್ರ ವಿಚಾರಧಾರೆ ಮೂಲಕ ಶರಣರು ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ಪ್ರಯತ್ನಿಸಿದ್ದರು ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ದೇಶದ ಮೇಲೆ ಜಾಗತಿಕರಣದ ಕತ್ತಲು ಗಾಢವಾಗಿ ಕವಿದು ಸಂಸ್ಕೃತಿ ಹಾಗೂ ನಿತ್ಯದ ಬದುಕಿನ ಮೇಲೆ ಪ್ರಭಾವ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಚನ ಸಾಹಿತ್ಯ ಬೆಳಕು ಚೆಲ್ಲುವ ಶಕ್ತಿ ಹೊಂದಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲಸಿಪ್ಪಿ ಪ್ರಾಸ್ತಾವಿಕ ಮಾತನಾಡಿ, ಇಂದು ದಿನಬೆಳಗಾದರೆ ಟಿವಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಪ್ರಸಾರಗೊಳ್ಳುವ ಪಂಚಾಂಗ ಭವಿಷ್ಯ ಅನೇಕ ಬಗೆಯ ಕಾರ್ಯಕ್ರಮಗಳು ಮೌಢ್ಯಕ್ಕೆ ಕಾರಣವಾಗಿ, ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಜನರು ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಎಂ.ವಿ. ಧುತ್ತರಗಾಂವ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಮಾಲತಿ ರೇಶ್ಮಿ, ರುದ್ರಪ್ಪ ಚಟ್ನಳ್ಳಿ, ಕೆ. ಗಿರಿಮಲ್ಲ, ಸುಶಿಲಾಬಾಯಿ ಗುರಣ್ಣ ಚಟ್ನಳ್ಳಿ, ಶ್ರೀಕಾಂತಗೌಡ ತಿಳಗೂಳ, ಶಾಂತಪ್ಪಗೌಡ ನರಿಬೋಳ, ಬಸ್ಸುಗೌಡ ಬಿರಾದಾರ, ರುದ್ರಮುನಿ ಸ್ವಾಮಿ ಸ್ಥಾವರಮಠ, ಕಲ್ಯಾಣಕುಮಾರ ಸಂಗಾವಿ, ರಾಜಶೇಖರ ಸಾಹುರೆಡ್ಡಿ, ನೀಲ ಲೋಹಿತ ಹಳ್ಳಿ, ಭೂಷಣ ಕಟ್ಟಿಮನಿ ಉಪಸ್ಥಿತರಿದ್ದರು.