ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಡಿಸಿಗಳ ಬದಲಾವಣೆ; ನೀರಿಗೆ ತಪ್ಪದ ಬವಣೆ

Rashmi Kasaragodu
Updated On : 23 May 2013, 11:37 am

ರಾಯಚೂರು: ಮೊದಲಿಗೆ ನಗರಸಭೆ ಆನಂತರದಲ್ಲಿ ವಿಧಾನಸಭೆ ಹೀಗೆ ಎರಡೆರಡು ಚುನಾವಣೆ ಪೂರ್ಣಗೊಳಿಸುವ ಭರದಲ್ಲಿ ಜಿಲ್ಲೆಯ ಅಧಿಕಾರಿಗಳು ಜನರು ಎದುರಿಸುತ್ತಿರುವ ನೀರಿನ ಅಭಾವವನ್ನೇ ಮರೆತರು.
 ಪರಿಣಾಮ ಜಿಲ್ಲೆಯಲ್ಲಿ ಬೇಸಿಗೆ ಅಂತ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜಾಗುತ್ತಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪರದಾಟಕ್ಕೆ ಕೊನೆಯಿಲ್ಲ ಎಂಬಂತಾಗಿದೆ.
ಎರಡು ವರ್ಷಗಳಿಂದ ಜಿಲ್ಲೆಯನ್ನು ಭೀಕರ ಬರ ಕಾಡುತ್ತಿದೆ. ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಹರಿದರೂ, ಸಮರ್ಪಕ ಕುಡಿಯುವ ನೀರಿನ ಯೋಜನೆಗಳ ಜಾರಿಯತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಒಲವಿಲ್ಲ. ಜನರಿಗೆ ಕುಡಿಯುವ ನೀರಿಗೆ ಅಲೆದಾಟ ತಪ್ಪಿಲ್ಲ.
ನೀರಿನ ತೀವ್ರ ಅಭಾವ: ಪ್ರತಿ ವರ್ಷ ಬೇಸಿಗೆಯ ಬಿರುಬಿಸಿಲ ಆಗಮನದೊಂದಿಗೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವದ ದಿನಗಳೂ ಎದು ರಾಗುತ್ತವೆ. ಆದರೆ ಕಳೆದೆರಡು ವರ್ಷಗಳ ಬರ ಜಿಲ್ಲೆಯಲ್ಲಿ ಈ ಬಾರಿ ನೀರಿನ ತೀವ್ರ ಅಭಾವ ಸೃಷ್ಟಿಸಿದೆ. ಜನತೆ ಹನಿ ನೀರಿಗೂ ಪರದಾಡುವಂಥ ಸ್ಥಿತಿಯಿದೆ.
ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಜಿಲ್ಲಾಡಳಿತ ಸಜ್ಜಾಗುವುದು ತೀರಾ ಸಾಮಾನ್ಯ ಸಂಗತಿ. ಆದರೆ ಪ್ರಸಕ್ತ ವರ್ಷ ನಗರಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಫೆಬ್ರವರಿಯಿಂದ ಏಪ್ರಿಲ್‌ವರೆಗೆ ನಡೆದಿದ್ದರಿಂದ ಜಿಲ್ಲಾಡಳಿತ ಚುನಾವಣೆಯ ಕಾರ್ಯದಲ್ಲಿ ಸಿಲುಕಿತು.
ತಾಲೂಕು ಮಟ್ಟದ ಅಧಿಕಾರಿಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ನೀರಿನ ಅಭಾವದ ಪರಿಸ್ಥಿತಿ ಅವಲೋಕನ ಮತ್ತು ಸಮಸ್ಯೆ ನಿವಾರಣೆಗೆ ಅಗತ್ಯ ಅನುದಾನ ಲಭ್ಯವಿದ್ದರೂ ಮುಂದಾಗಿಲ್ಲ.  
ಪರಿಣಾಮ ಸದ್ಯ ಜಿಲ್ಲೆಯ ಸುಮಾರು 300ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಆದರೆ ತಾಲೂಕು ಅಧಿಕಾರಿಗಳು ಜಿಲ್ಲಾಡಳಿತಕ್ಕೆ ತಪ್ಪು ವರದಿ ನೀಡಿದ್ದು, ಈಗ ಜನರ ಸಮಸ್ಯೆ ಉಲ್ಬಣಿಸಿದೆ.
ಚುನಾವಣೆಯತ್ತ ಚಿತ್ತ: ನಗರಸಭೆ ಚುನಾವಣೆ ವೇಳೆ ಜಿಲ್ಲಾಧಿಕಾರಿಯಾಗಿದ್ದ ಎಸ್.ಎನ್. ನಾಗರಾಜ್ ಅವರನ್ನು ವಿಧಾನಸಭೆ ಚುನಾವಣೆ ವೇಳೆಗೆ ಬೇರೆಡೆಗೆ ತಾತ್ಕಾಲಿಕವಾಗಿ ವರ್ಗಾಯಿಸಲಾಯಿತು. ನೇರವಾಗಿ ಚುನಾವಣೆಯ ಕಾರ್ಯಕ್ಕೆಂದೇ ನಿಯೋಜನೆಗೊಂಡ ನಂತರದ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಜಿಲ್ಲೆಯ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಆರಂಭದಲ್ಲಿ ಆಸಕ್ತಿ ತೋರಿದರೂ, ನಂತರದಲ್ಲಿ ಚುನಾವಣೆಯ ಕಾರ್ಯದಲ್ಲಿ ನಿರತರಾಗಿದ್ದು, ಸಮಸ್ಯೆಯತ್ತ ಗಮನಹರಿಸಲಿಲ್ಲ.
ಸಮಸ್ಯೆ ನಿವಾರಣೆಗೆ ಒತ್ತು: ಈಗ ಚುನಾವಣೆ ಮುಗಿದಿದ್ದು, ಮತ್ತೆ ಜಿಲ್ಲಾಧಿಕಾರಿಗಳ ಬದಲಾವಣೆಯಾಗಿದೆ. ಈ ಮೊದಲು ಜಿಲ್ಲಾಧಿಕಾರಿಯಾಗಿದ್ದ ಎಸ್.ಎನ್.ನಾಗರಾಜ್ ಪುನಾ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದು, ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಈಗಷ್ಟೇ ಮುಂದಾಗಿದ್ದಾರೆ.
ತಾಲೂಕಿನಿಂದ ಅಧಿಕಾರಿಗಳು ಇದುವರೆಗೆ ನೀರಿನ ಅಭಾವವಿಲ್ಲ ಎಂಬ ಸುಳ್ಳು ಮಾಹಿತಿಯನ್ನೇ ರವಾನಿಸಿದ್ದು ಈಗ ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಬೇಸಿಗೆಯ ಅಂತ್ಯಕ್ಕೆ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.ಈ ಕುರಿತು ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ ಜಿಲ್ಲಾಡಳಿತಕ್ಕೆ ತಾಲೂಕಿನ ಹನುಮಾಪುರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಸಮಸ್ಯೆ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಅದರಿಂದ ಎಚ್ಚೆತ್ತ ಜಿಲ್ಲಾಡಳಿತ ಈಗ ತಾಲೂಕು ಮಟ್ಟದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು ಜಿಲ್ಲೆಯ ಸುಮಾರು 300 ಗ್ರಾಮಗಳಲ್ಲಿ ಕಂಡುಬಂದಿರುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲು ಯೋಜಿಸಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement