ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಾಲೂಕು ರಚನೆ: ಮಂತ್ರಿ ಹೇಳಿಕೆಗೆ ಕಿಡಿ

Rashmi Kasaragodu
Updated On : 23 May 2013, 11:39 am

ರಾಯಚೂರು: ಚುನಾವಣೆಯಲ್ಲಿ ಲಾಭದ ನಿರೀಕ್ಷೆ. ಮತದಾರರ ಓಲೈಕೆಗೆ ನೂತನ ತಾಲೂಕುಗಳ ಘೋಷಣೆ. ವಿಜಯೋತ್ಸವ, ಸಂಭ್ರಮಾಚರಣೆ ಕಂಡಿದ್ದ ಜಿಲ್ಲೆಯ ಮಸ್ಕಿ ಹಾಗೂ ಸಿರವನಾರ ನೂತನ ತಾಲೂಕುಗಳ ಜನತೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆಘಾತ ಉಂಟು ಮಾಡುವ ನಿರ್ಧಾರ ತಳೆದಿದೆ. ನೂತನ ತಾಲೂಕುಗಳ ಅನುಷ್ಠಾನದ ಬಗ್ಗೆ ಕಂದಾಯ ಸಚಿವರ ಹೇಳಿಕೆ ಹೋರಾಟಗಾರರಲ್ಲಿ ಅಸಮಾಧಾನ ಉಂಟು ಮಾಡಿದೆ.
ರಾಜ್ಯದಲ್ಲಿ ಕಳೆದ ಅವಧಿಗೆ ಅಧಿಕಾರದಲ್ಲಿದ್ದ ಬಿಜೆಪಿಯ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ನೂತನ ತಾಲೂಕುಗಳಾಗಿ ಲಿಂಗಸ್ಗೂರು ತಾಲೂಕಿನ ಮಸ್ಕಿ ಹೋಬಳಿ ಮತ್ತು ಮಾನವಿ ತಾಲೂಕಿನ ಸಿರವಾರ ಹೋಬಳಿಗಳನ್ನು ಘೋಷಿಸಿತ್ತು. ಸರ್ಕಾರದ ನಿರ್ಧಾರ ಆಗ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಸಿದ್ದ ಜನತೆಗೆ ಸಂತಸ ತಂದಿತು.
ಅಪಸ್ವರ: ಚುನಾವಣೆಯಲ್ಲಿ ಮತದಾರರ ಒಲವು ಗಳಿಸಲು ಕೈಗೊಂಡ ಆ ನಿರ್ಧಾರಕ್ಕೆ ಈಗ ಬೆಲೆ ಬರುವ ಲಕ್ಷಣಗಳಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಪಡೆದು ಅಧಿಕಾರ ಪಡೆಯುತ್ತಿದ್ದಂತೆಯೇ ನೂತನ ತಾಲೂಕುಗಳ ಘೋಷಣೆಯ ಬಗ್ಗೆ ಅಪಸ್ವರ ಕೇಳಿಬಂದಿದೆ.
ರಾಜ್ಯ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಿಸಿದ ನೂತನ ತಾಲೂಕುಗಳ ಅನುಷ್ಠಾನ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿದೆ ಎಂಬ ಧಾಟಿಯ ಮಾತನಾಡಿರುವುದು ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಮಸ್ಕಿ ಮತ್ತು ಸಿರವಾರ ತಾಲೂಕು ಕೇಂದ್ರಗಳ ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಎಚ್ಚರಿಕೆ ಸಂದೇಶ: ಈಗಾಗಲೇ ಈಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಲಿಂಗಸ್ಗೂರು ತಾಲೂಕಿನ ಕುಪ್ಪಿಗುಡ್ಡ, ಸರ್ಜಾಪುರ ಅಮರಾವತಿ ಗ್ರಾಮದ ಜನತೆ ತಮ್ಮ ಗ್ರಾಮಕ್ಕೆ ಮಸ್ಕಿ ತಾಲೂಕು ಕೇಂದ್ರ ದೂರದಲ್ಲಿದೆ. ಲಿಂಗಸ್ಗೂರು ಪಟ್ಟಣ ಸಮೀಪದಲ್ಲಿದ್ದು ಲಿಂಗಸ್ಗೂರು ತಾಲೂಕಿನಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಅದರಿಂದ ಮಸ್ಕಿ ತಾಲೂಕು ರಚನೆಯಲ್ಲಿ ಆತಂಕ ಈಗಾಗಲೇ ಎದುರಾಗಿದ್ದು, ಸದ್ಯ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ನೂತನ ತಾಲೂಕುಗಳ ಅನುಷ್ಠಾನಕ್ಕೆ ಆರ್ಥಿಕ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ ಎಂದು ಕಂದಾಯ ಸಚಿವರು ಹೇಳಿರುವುದು ಹೋರಾಟಗಾರರನ್ನು ಕೆರಳಿಸಿದೆ.
ಹೋರಾಟದ ಫಲ: ಈ ಕುರಿತು ಕನ್ನಡಪ್ರಭಕ್ಕೆ ಮಾತನಾಡಿದ ಮಸ್ಕಿ ನೂತನ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರನಗೌಡರು, ಮಸ್ಕಿ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಈ ಹಿಂದೆ ಅನೇಕ ಸಾರಿ ನಡೆಸಿದ ಹೋರಾಟದ ಫಲವಾಗಿ ಕಳೆದ ಸರ್ಕಾರ ತಾಲೂಕು ಕೇಂದ್ರ ಎಂದು ಘೋಷಿಸಿದೆ. ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ವೃಥಾ ವಿಳಂಬ ಮಾಡಿದಲ್ಲಿ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆರಂಭದಲ್ಲಿಯೇ ನೂತನ ತಾಲೂಕುಗಳ ವಿಚಾರವಾಗಿ ಗೊಂದಲ ಹುಟ್ಟಿಸಿದ್ದು, ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ಹೆಚ್ಚುವ ಸಾಧ್ಯತೆಯಿದೆ. ಅನೇಕ ವರ್ಷಗಳಿಂದ ಮಸ್ಕಿ, ಸಿರವಾರ ಹೋಬಳಿ ಕೇಂದ್ರಗಳು ನೂತನ ತಾಲೂಕು ಆಗಬೇಕೆಂಬ ಬೇಡಿಕೆಯಿದೆ. ಭೌಗೋಳಿಕವಾಗಿ, ಆರ್ಥಿಕವಾಗಿ ಸೇರಿದಂತೆ ವಿವಿಧ ಕಾರಣಗಳಿಗೆ ಇದು ಅನುಕೂಲಕರವೂ ಆಗಿದೆ. ಬಿಜೆಪಿ ಸರ್ಕಾರ ಈ ಎರಡೂ ಪಟ್ಟಣಗಳನ್ನು ನೂತನ ತಾಲೂಕುಗಳೆಂದು ಘೋಷಿಸಿದ್ದರಿಂದ ವಿಜಯೋತ್ಸವ ಆಚರಿಸಿದ್ದ ಜನತೆ ಪುನಾ ಹೋರಾಟಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement