ಪಿಎಸ್‌ಐ ಸಸ್ಪೆಂಡ್‌ಗೆ ಆಗ್ರಹ
ಸಿಂಧನೂರು: ತಾಲೂಕಿನ ಬಸಾಪುರ ಗ್ರಾಮದಲ್ಲಿ ಪಂಪನಗೌಡ ಎಂಬ ಬಲಿಷ್ಠ ಗೌಡರು. ಕಾನೂನುಬಾಹಿರವಾಗಿ ಭೂಮಿಯನ್ನು ಖರೀದಿಸಿ ಅಕ್ರಮ ಭೂಮಿ ಹೊಂದಿದ್ದು, ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಉಪಟಳ ಮೀತಿಮಿರಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ ಬರುವ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಅಮರೇಶ ಹಣವಂತರ ಪರವಾಗಿ ಕಾರ್ಯನಿರ್ವಹಿಸುತ್ತಾ ಕೃಷಿ ಕಾರ್ಮಿಕರ ಮೇಲೆ ವಿನಾಕಾರಣ ಕ್ರಿಮಿನಲ್ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಇವರನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಟಿಯುಸಿಐ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ ಆಗ್ರಹಿಸಿದರು.
ಸುಳ್ಳು ಮೊಕದ್ದಮೆ: ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ದಾಳವಾಗಿದ್ದಾರೆ. ಅವರ ಹಣದ ಪ್ರಭಾವಕ್ಕೆ ಒಳಗಾಗಿ ವಿನಾಕಾರಣ ಬಡವರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ. ಸಿಂಧನೂರು ತಾಲೂಕಿನಲ್ಲಿ 40-50 ವರ್ಷಗಳಿಂದ ಭೂಹೀನ ಬಡವರು, ದಲಿತರು, ಸಾಗುವಳಿ ಮಾಡುತ್ತಿರುವ ಭೂಮಿಗೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಾ ನೀಡಬೇಕು. ಜವಳಗೇರಾ ನಾಡಗೌಡರು 3600 ಎಕರೆ ಹೆಚ್ಚುವರಿ ಭೂಪ್ರಕರಣವನ್ನು ಮರುಪರಿಶೀಲನೆಗೊಳಪಡಿಸಬೇಕು. ಅನೇಕ ಗ್ರಾಮಗಳಲ್ಲಿ ಬಲಿಷ್ಠ ಶ್ರೀಮಂತರು, ಭೂಮಾಲೀಕರು, ಅನಧಿಕೃತ ಕಬ್ಜಾ ಹೊಂದಿದ ಭೂ ಒಡೆಯರಿಂದ ಭೂಮಿಯನ್ನು ಬಡವರಿಗೆ ವಿಶೇಷಾಧ್ಯತೆ ಮೇರೆಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ರಾಜಕಾರಣಿಗಳ ಗುಲಾಮರು: ಬಸಾಪುರ, ತಿಡಿಗೋಳ, ಬೂದಿವಾಳ, ವೆಂಕಟೇಶ್ವರಕ್ಯಾಂಪ, ಅಮರಾಪುರ, ಬೂದಿವಾಳಕ್ಯಾಂಪ್, ಸೇರಿದಂತೆ ತಾಲೂಕಿನಲ್ಲಿ 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ಕಳೆದ ವರ್ಷ ಸತತ 34 ದಿನಗಳವರೆಗೆ ಅನಿರ್ಧಿಷ್ಟ ಹೋರಾಟ ಮಾಡಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರ ಮುಖಾಂತರ ಭರವಸೆ ನೀಡಿದರು. ಜವಳಗೇರಿಯ ನಾಡಗೌಡರ ಅವಿಭಕ್ತ ಕುಟುಂಬಕ್ಕೆ ಸೇರಿದ ಜಮೀನು ಸರ್ವೆ ನಂ. 41, 42, 43, 64 ಇತರೇ ನೂರಾರು ಎಕರೆ ಜಮೀನನ್ನು ವಿಠಲರಾವ್ ಕುಟುಂಬದವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ.
ಕುಂಟು ನೆಪ ಹೇಳುತ್ತಾ: ಈ ಬಗ್ಗೆ 1991 ರಲ್ಲಿ ಐತಿಹಾಸಿಕ ಹೋರಾಟ ನಡೆಸಲಾಗಿತ್ತು. ಆಗಿನ ಜಿಲ್ಲಾಧಿಕಾರಿ ರತ್ನಪ್ರಭಾ ಅವರ ಸಲಹೆ ಮೇರೆಗೆ ಸರ್ವೆ ನಂ. 41, 42, 43 ರ 31 ಎಕರೆ ಭೂಮಿ ಬಸಾಪುರ (ಇಜೆ) ಗ್ರಾಮದ ದಲಿತರು ಹಾಗೂ ಇತರೆ ಬಡವರಿಗೆ ಹಂಚಲು ತೀರ್ಮಾನಿಸಲಾಗಿತ್ತು. ಈ ಹಿಂದಿನಿಂದ ಸಾಗುವಳಿ ಮಾಡುತ್ತಿದ್ದ ವಿಠಲರಾವ್ 2002 ರಲ್ಲಿ ತಹಸೀಲ್ದಾರ್ ಸಮಕ್ಷಮ ಛಾಪಾ ಕಾಗದದ ಮೇಲೆ ಬಡವರಿಗೆ ಜಮೀನು ನೀಡುವುದಾಗಿ ಬರೆದು ಕೊಟ್ಟಿದ್ದರು. ಆದರೆ ಇದುವರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕುಂಟು ನೆಪ ಹೇಳುತ್ತಾ ಭೂಮಿಯನ್ನು ಹಂಚದೆ ಬಡವರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೆಆರ್‌ಎಸ್ ತಾಲೂಕಾಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಆರ್‌ವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ, ಮುಖಂಡರಾದ ಸುಬಾಶ ಬಸಾಪುರ, ಗೋಪಾಲರಾವ್, ರಾಜಾಸಾಬ, ಹುಲುಗಪ್ಪ ಬಳ್ಳಾರಿ, ಮರಿಯಮ್ಮ ಬಸಾಪುರ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.