ಹಣ, ಹೆಂಡ ಹಂಚಿ ಗೆಲುವು: ವೈಜನಾಥ್
ಸೇಡಂ: ಕ್ಷೇತ್ರದಲ್ಲಿ ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಣ ಮತ್ತು ಹೆಂಡ ವ್ಯಾಪಕವಾಗಿ ಕೆಲಸ ಮಾಡಿತ್ತು ಎಂದು ಮಾಜಿ ಸಚಿವ ವೈಜನಾಥ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ ಚಿಂತನ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದಾದ್ಯಂತ ಕಡೆಯ ದಿನಗಳಂದು ಮತದಾರರನ್ನು ಸೆಳೆಯಲು ಹಣ ಹಾಗೂ ಹೆಂಡವನ್ನು ಲೆಕ್ಕವಿಲ್ಲದೆ ಹಂಚುವ ಮೂಲಕ ಕ್ಷೇತ್ರದಲ್ಲಿ ಹಿಂದೆಂದು ಕಾಣದಂತಹ ಕೆಟ್ಟ ಸಂಪ್ರದಾಯ ಹಾಕಿರುವುದು ವಿಷಾದನೀಯ ಸಂಗತಿ ಎಂದರು.
ಸೇಡಂ ಕ್ಷೇತ್ರಕ್ಕೆ ಅಭಿವೃದ್ಧಿಯಲ್ಲಿ ಹಿನ್ನಡೆಯಾದಾಗ ಕರ್ನಾಟಕ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಹೋರಾಟದ ಹಾದಿ ತುಳಿಯೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕ್ಷೇತ್ರದ ಜನತೆ ನನಗೆ ಈ ಅಲ್ಫ ಅವಧಿಯಲ್ಲಿ ನೀಡಿದ ಪ್ರೋತ್ಸಾಹಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಭೆಯಲ್ಲಿ ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಅನಂತೇಶ್ವರರೆಡ್ಡಿ ಪಾಟೀಲ್, ಡಾ. ವೆಂಕಟರೆಡ್ಡಿ ಪಾಟೀಲ್, ಶರಣರೆಡ್ಡಿ ಪಾಟೀಲ್ ಜಿಲ್ಲೆಡಪಲ್ಲಿ, ಪರ್ವತರೆಡ್ಡಿ ಪಾಟೀಲ್, ರವೀಂದ್ರ ಇಂಜಳ್ಳಿಕರ್, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಂ ಪಾಟೀಲ್, ಎಸ್.ಎಸ್ ಪಾಕಲ್, ನಾಗಭೂಷಣರೆಡ್ಡಿ ಪಾಟೀಲ್, ಶರಣಭೂಪಾಲರೆಡ್ಡಿ ಪಾಟೀಲ್, ಶ್ರೀಶೈಲ್ ಎಂ.ಜಿ, ವೆಂಕಟರೆಡ್ಡಿ ಪೊಲೀಸ್ ಪಾಟೀಲ್, ಶರಣು ಮೋತಕಪಳ್ಳಿ, ಶಾಂತು ಚೆನ್ನಕ್ಕಿ, ಮಲ್ಲಿಕಾರ್ಜುನ ಮಂತಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.