ಗುಲ್ಬರ್ಗ: 26ರಂದು ಕರಿಯರ್ ಕೌನ್ಸೆಲಿಂಗ್
ಗುಲ್ಬರ್ಗ: ದ್ವಿತೀಯ ಪಿಯುಸಿ ಮುಗಿಸಿದವರಿಗೆ ಮುಂದಿನ ಶಿಕ್ಷಣದ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡುವ ಕರಿಯರ್ ಕೌನ್ಸೆಲಿಂಗ್ ಕಾರ್ಯಕ್ರಮ ಮೇ 26ರಂದು ಬೆಳಗ್ಗೆ 10ಕ್ಕೆ ನಗರದ ಶರಣಬಸವೇಶ್ವರ ಕಾಲೇಜಿನ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ನಡೆಯಲಿದೆ.
ಎಜುಕೇಷನ್ ಪ್ಲಸ್ ವತಿಯಿಂದ ಇಲ್ಲಿ ನಡೆಯುತ್ತಿರುವ 10ನೇ ಕರಿಯರ್ ಕೌನ್ಸೆಲಿಂಗ್ ಇದಾಗಿದ್ದು, ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗಳಿಗೆ ಮಾರ್ಗದರ್ಶಿ ಕಾರ್ಯಕ್ರಮ ಇದಾಗಿದೆ.
ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಸ್. ಶಿವಮೂರ್ತಿ ಉದ್ಘಾಟಿಸಿ ಎಂಜಿನಿಯರಿಂಗ್ ಕೋರ್ಸ್ಗಳ ಹಾಗೂ ಪಿಯುಸಿ ನಂತರ ಕೇಂದ್ರೀಯ ವಿವಿಯಲ್ಲಿ ಯಾವ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಕುರಿತು ಉಪನ್ಯಾಸ ನೀಡುವರು. ಭಾರತೀಯ ನಾಗರಿಕ ಸೇವೆಗಳ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಡಾ. ದಯಾನಂದ ಸಾಮಾನ್ಯ ಶಿಕ್ಷಣ ಪ್ರವೇಶ ಕುರಿತು ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬೀಜ ತಜ್ಞ ವಾಸುದೇವನ್ ಕೃಷಿ ಕೋರ್ಸ್ಗಳ ಕುರಿತು ಮಾಹಿತಿ ನೀಡುವರು. ಇದರಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪಾಸಾದವರು ಮತ್ತು ಓದುತ್ತಿರುವವರು ಪಾಲ್ಗೊಳ್ಳಬಹುದು. ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಕೈಪಿಡಿ ಉಚಿತವಾಗಿ ನೀಡಲಾಗುತ್ತಿದೆ.