ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿರ್ಮಿತಿ ಕೇಂದ್ರಕ್ಕೆ ಅಧಿಕಾರಿಗಳ ತಂಡ ಭೇಟಿ; ಪರಿಶೀಲನೆ

Rashmi Kasaragodu
Updated On : 24 May 2013, 11:54 am

ಕ.ಪ್ರ. ವಾರ್ತೆ   ರಾಯಚೂರು   ಮೇ 23
ಇಲ್ಲಿನ ನಿರ್ಮಿತಿ ಕೇಂದ್ರದ ಅವ್ಯವಹಾರ ಪ್ರಕರಣ ಸಿಬಿಐಗೆ ಗುಲ್ಬರ್ಗದ ಹೈಕೋರ್ಟ್ ಈಗಾಗಲೇ ಒಪ್ಪಿಸಿದೆ. ರಾಜೀವಗಾಂಧಿ ವಸತಿ ನಿಗಮದಿಂದ ನಿರ್ಮಿತಿ ಕೇಂದ್ರಕ್ಕೆ ನೀಡಿದ ಆಸರೆ ಮನೆಗಳ ಕಾಮಗಾರಿ ಪ್ರಗತಿಯ ಮಾಹಿತಿ ನೀಡುವಂತೆ ಸಿಬಿಐ ಸೂಚಿಸಿದ ಹಿನ್ನೆಲೆ, ವಸತಿ ನಿಗಮದ ಅಧಿಕಾರಿಗಳ ತಂಡವು ಗುರುವಾರ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
2009ರಲ್ಲಿ ಜಿಲ್ಲೆಯ ವಿವಿಧೆಡೆ ಪ್ರವಾಹದಿಂದ ತೊಂದರೆಗೊಳಗಾಗಿರುವ ಪ್ರದೇಶದಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ಸಂತ್ರಸ್ತರಿಗೆ ನೀಡಲು 1039 ಆಸರೆ ಮನೆಗಳನ್ನು ನಿರ್ಮಿಸುವ ಹೊಣೆ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ನಿರ್ಮಾಣದ ಹೊಣೆ ಹೊತ್ತಿದ್ದ ಕೇಂದ್ರದ ಅಧಿಕಾರಿಗಳು ಅರ್ಧಮರ್ಧ ಕಾಮಗಾರಿ ಮುಗಿಸಿದ್ದರೂ ಕಾಮಗಾರಿ ಪೂರ್ಣಗೊಂಡಿದೆ ಎಂಬ ವರದಿ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಇದರ ಸತ್ಯಾಸತ್ಯತೆಯನ್ನು ಅರಿಯಲು ನಿಗಮದ ಪ್ರಧಾನ ವ್ಯವಸ್ಥಾಪಕ ಬಿರಾದಾರ ನೇತೃತ್ವದ ತಂಡ ಆಗಮಿಸಿ ಮಾಹಿತಿ ಕಲೆ ಹಾಕಿದೆ ಎಂದು ಗೊತ್ತಾಗಿದ್ದು, ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಸರೆ ನಿರ್ಮಾಣದ ಕಾಮಗಾರಿ ವಹಿಸಿಕೊಂಡಿದ್ದ ನಿರ್ಮಿತಿ ಕೇಂದ್ರವು 69ಕ್ಕೂ ಹೆಚ್ಚಿನ ಆಸರೆ ಮನೆಗಳನ್ನು ನಿರ್ಮಿಸದೇ ಕಾಮಗಾರಿ ಪೂರ್ಣಗೊಂಡಿದೆ ಎಂದು ನಿಗಮಕ್ಕೆ ವರದಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಸಿಬಿಐ ಅಧಿಕಾರಿಗಳು ನಿಗಮದಿಂದ ಮಾಹಿತಿ ಕೇಳಿದ್ದರಿಂದ ನಿಗಮದ ಅಧಿಕಾರಿಗಳು ನಗರದ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಸರೆ ಯೋಜನೆ ಅಡಿ ನಿರ್ಮಿಸಿದ ಮನೆಗಳ ಕಾಮಗಾರಿಯನ್ನೂ ವೀಕ್ಷಿಸಿದರೆಂದು ಮೂಲಗಳು ತಿಳಿಸಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement