ನೂತನ ಸಚಿವ ಖಮರುಲ್ ಇಸ್ಲಾಂ ಸ್ವಾಗತಕ್ಕೆ ಸಿದ್ಧತೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 23
ಕರ್ನಾಟಕ ರಾಜ್ಯದ ಪೌರಾಡಳಿತ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಮತಕ್ಷೇತ್ರಕ್ಕೆ ಆಗಮಿಸುತ್ತಿರುವ ಖಮರುಲ್ ಇಸ್ಲಾಂ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಗುಲ್ಬರ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೇ 25ರಂದು ಖಮರುಲ್ ಇಸ್ಲಾಂ ಸಂಜೆ ನಗರದಕ್ಕೆ ಆಗಮಿಸಲಿದ್ದಾರೆ. ನಗರದ ಹುಮನಾಬಾದ್ ರಸ್ತೆಯ ಹೊರವಲಯದಿಂದ ಅವರನ್ನು ಬರಮಾಡಿಕೊಳ್ಳಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಸಗರ್ ಚುಲಬುಲ್, ರಾಜ್ಯದಲ್ಲಿ ಜನತೆಯ ಆಶೀರ್ವಾದದಿಂದ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೈ-ಕ ಭಾಗದಲ್ಲಿ 371ನೇ ಕಲಂ ಅನುಷ್ಠಾನಗೊಂಡಿದ್ದು, ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತಾಗಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಈ ಭಾಗಕ್ಕೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ದೊರಕುವಂತಾಗಬೇಕು ಎಂದರು.
ಖಮರುಲ್ ಇಸ್ಲಾಂ ಸೇರಿದಂತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಬಾಬುರಾವ ಚಿಂಚನಸೂರ ನಗರಕ್ಕೆ ಆಗಮಿಸುತ್ತಿದ್ದು, ಜಿಲ್ಲೆಯ ವತಿಯಿಂದ ಪಕ್ಷದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಅಂದು ಸಂಜೆ ಮೆರವಣಿಗೆಯ ನಂತರ ಸೂಪರ್ ಮಾರ್ಕೆಟ್ನಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸತ್ ಸದಸ್ಯ ಧರ್ಮಸಿಂಗ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ, ಬಾಬು ವಂಟಿ, ಕಾರ್ಯದರ್ಶಿ ಆದಿಲ್ ಸುಲೇಮಾನ್, ಪಾಲಿಕೆ ಸದಸ್ಯ ಭೀಮರೆಡ್ಡಿ ಪಾಟೀಲ್ ಕುರುಕುಂದಾ, ಸೈಯದ್ ಅಹ್ಮದ್ ಅಲಿಖಾನ್, ಹಮೀದ್ ನಿಸ್ಸಾರ್, ಮಲ್ಲಿಕಾರ್ಜುನ ಟೆಂಗಳಿ, ರಾಜು ಕಪನೂರ, ಶರಣು ಮೋದಿ, ಯಲ್ಲಪ್ಪ ನಾಯ್ಕೊಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಜರ್ ಖಾನ್, ಮಾಜಿ ಮಹಾಪೌರ ಇಕ್ಬಾಲ್ ಶಿರ್ನಿಫರೋಸ್ ಮಹ್ಮದ್ ಜಾಹೇದ್ ಇದ್ದರು.