ಯುಜಿಡಿ ಯೋಜನೆ ವಿಳಂಬಕ್ಕೆ ಬಾದರ್ಲಿ ಆಕ್ರೋಶ
ಕ.ಪ್ರ. ವಾರ್ತೆ ಸಿಂಧನೂರು ಮೇ 23
ನಗರದ ಬೆಳವಣಿಗೆಗೆ ಪೂರಕವಾಗಿರುವ ಮಹತ್ವಾಕಾಂಕ್ಷಿ ವಿಶ್ವಬ್ಯಾಂಕ್ ನೆರವಿನ ಯು.ಜಿ.ಡಿ. ಯೋಜನೆ ವಿಳಂಬಕ್ಕೆ ಶಾಸಕ ಹಂಪನಗೌಡ ಬಾದರ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರಸಭೆಯಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಯು.ಜಿ.ಡಿ. ಯೋಜನೆಯ ಸಹಾಯಕ ಎಂಜಿನೀಯರ್ ಶರಣಬಸವ ಸಭೆಯ ಕೊನೆಯಲ್ಲಿ ಯೋಜನೆ ಟೆಂಡರ್ ಮೂರು ಬಾರಿ ರದ್ದಾಗಿರುವುದನ್ನು ಪ್ರಸ್ತಾಪಿಸುತ್ತಿದ್ದಂತೆ ಬಾದರ್ಲಿ ತೀವ್ರ ಸಿಡಿಮಿಡಿಗೊಂಡರು.
ಒಂದು ಬಾರಿ ಟೆಂಡರ್ ರದ್ದಾದರೆ ಒಪ್ಪಬಹುದು. ಮೂರು ಬಾರಿ ರದ್ದಾಗಿರುವುದರ ಹಿನ್ನೆಲೆ ಏನು ಎಂದು ಪ್ರಶ್ನಿಸಿದರು. ಆಗ ಮಧ್ಯೆ ಪ್ರವೇಶಿಸಿದ ನಗರಸಭೆ ಎಂಜಿನಿಯರ್ ಗಂಗಾಧರ ಟೆಂಡರ್ ಮಾಹಿತಿ ನೀಡಲು ಮುಂದಾದರು. ಯುಜಿಡಿ ಯೋಜನೆ ಮಾಹಿತಿ ನಗರಸಭೆ ಎಂಜಿನಿಯರಾದ ನಿಮಗೇನು ಗೊತ್ತು ಎಂದು ಮತ್ತೇ ಬಾದರ್ಲಿ ಹರಿಹಾಯ್ದರು. ಆದರೂ ಸಹ ಗಂಗಾಧರ ತಾವು ಯೋಜನೆಯ ಸಭೆಗಳಲ್ಲಿ ಭಾಗವಹಿಸಿದ್ದರಿಂದ ತಮಗೆ ಮಾಹಿತಿ ಇದೆ ಎಂದು ಯೋಜನೆ ಟೆಂಡರ್ ರದ್ದಾದ ಕುರಿತು ಮಾಹಿತಿ ನೀಡಿದರು.
ಮುಂದಿನ ಯು.ಜಿ.ಡಿ. ಸಭೆಯನ್ನು ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರ ಮಧ್ಯೆ ನಡೆಸಬೇಕು. ಕೂಡಲೇ ಕಾಮಗಾರಿಗೆ ಚಾಲನೆ ಸಿಗಬೇಕು. ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.