ವಾಲ್ಮೀಕಿ ನಾಮಫಲಕಕ್ಕೆ ಅಪಮಾನ; ಖಂಡನೆ
ದೇವದುರ್ಗ: ತಾಲೂಕಿನ ಅರಕೇರಾ ಗ್ರಾಮದಲ್ಲಿ ವಿಶ್ವಗುರು ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ದುಷ್ಕರ್ಮಿಗಳು ಕಲ್ಲುಗಳಿಂದ ಹೊಡೆದು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಘಟನೆಯನ್ನು ಖಂಡಿಸಿರುವ ಜಿಲ್ಲಾ ವಾಲ್ಮೀಕಿ ವಿದ್ಯಾರ್ಥಿ ಸಂಘವು ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಹನುಮಂತರಾಯ ನಾಯಕ ಅವರು, ಅರಕೇರಾ ಗ್ರಾಮದಲ್ಲಿನ ವಾಲ್ಮೀಕಿ ಮಹರ್ಷಿ ನಾಮಫಲಕವನ್ನು ಕಿತ್ತು ನೆಲಕ್ಕೆ ಹಾಕಿರುವ ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಚಪ್ಪಲಿ ಹಾರ ಹಾಕಿದ್ದಾರೆ. ಕೂಡಲೇ ಮಹಾನ್ ವ್ಯಕ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದ್ದಾರೆ.
26ರಂದು ಅಹಿಂದ ಸಭೆ
ರಾಯಚೂರು: ನಗರದ ರಂಗಮಂದಿರದ ಹಿಂಭಾಗದಲ್ಲಿರುವ ಪತ್ರಿಕಾ ಭವನದಲ್ಲಿ ಮೇ 26ರಂದು ಅಹಿಂದ ಸಂಘಟನೆಯ ಮಹತ್ವದ ಸಭೆಯನ್ನು ಕರೆಯಲಾಗಿದೆ ಎಂದು ಅಹಿಂದ ಸಂಘಟನೆಯ ಮುಖಂಡ ಆರ್. ರಾಮು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿ, ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಭೆಯ ನೇತೃತ್ವವನ್ನು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರರೆಡ್ಡಿ ವಹಿಸಲಿದ್ದಾರೆ.