ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಬಲದಂಡೆ' ದುರಸ್ತಿಗೆ ಭಾಗ್ಯ ಸಿಕ್ಕೀತೆ?

Lingaraj Badiger
Updated On : 25 May 2013, 11:13 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 24
ಕೃಷ್ಣಾ ಭಾಗ್ಯ ಜಲನಿಗಮದ ನಾರಾಯಣಪುರ ಎಡದಂಡೆ ಕಾಲುವೆ ನಿರ್ಮಿಸಿ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಕಲ್ಪಿಸಲಾಗಿದೆ. ಆದರೆ ಐದಾರು ದಶಕ ಬಾಳಿಕೆ ಬರಬೇಕಾದ ಬಲದಂಡೆ ಕಾಲುವೆ, ನಿರ್ಮಿಸಿದ ಕೆಲವೇ ವರ್ಷಗಳಲ್ಲಿ ಅಭದ್ರ ಸ್ಥಿತಿಗೆ ತಲುಪಿರುವುದು ಈ ಭಾಗದ ರೈತರ ದೌರ್ಭಾಗ್ಯವೆಂದೇ ಹೇಳಬಹುದು.
ನಾರಾಯಣಪುರ ಜಲಾಶಯಕ್ಕೆ ಆಣೆಕಟ್ಟು ನಿರ್ಮಿಸಿ ಎಡದಂಡೆ ಮತ್ತು ಬಲದಂಡೆ ನಾಲೆ ನಿರ್ಮಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಡದಂಡೆ ಕಾಲುವೆಗಳ ದುರಸ್ತಿಗೆ ಸಾವಿರಾರು ಕೋಟಿ ರು. ಬಿಡುಗಡೆಗೊಳಿಸಲಾಗಿದೆ. ಆದರೆ ಬಲದಂಡೆ ಕಾಲುವೆ ದುರಸ್ತಿಗೆ ಹಣ ಬಿಡುಗಡೆ ಮಾಡದೆ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬುದು ಈ ಭಾಗದ ರೈತರ ಆರೋಪವಾಗಿದೆ.
ಜಿಲ್ಲೆಯ ರಾಯಚೂರು, ಲಿಂಗಸ್ಗೂರು, ದೇವದುರ್ಗ ತಾಲೂಕುಗಳಲ್ಲಿ ನೀರಾವರಿ ಭಾಗ್ಯ ಕಾಣದೆ ಒಣ ಬೇಸಾಯದಿಂದ ಬದುಕು ಸಾಗಿಸುತ್ತಿದ್ದ ರೈತರಿಗೆ, ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1995 ಡಿಸೆಂಬರ್ 5ರಂದು ರೋಡಲಬಂಡಾ ಗ್ರಾಮದಲ್ಲಿ ಬಲದಂಡೆ ಕಾಲುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು.
ತುಂಡು ಗುತ್ತಿಗೆ: ಬಲದಂಡೆ ಕಾಲುವೆ ಕಾಮಗಾರಿ ಗುತ್ತಿಗೆ ಪಡೆಯಲು ಈ ಭಾಗದ ಗುತ್ತಿಗೆದಾರರ ಕೊರತೆಯಿಂದ ಲಗ್ಗೆಯಿಟ್ಟ ನೆರೆಯ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಲಾಯಿತು. ಕಾಮಗಾರಿ ಕೆಲಸಕ್ಕೆ ದೊಡ್ಡದೊಡ್ಡ ಹಿಟಾಚಿ ಯಂತ್ರಗಳು, ಬ್ಲಾಸ್ಟ್ ಯಂತ್ರಗಳು, ರೂಲರ್ ಯಂತ್ರಗಳು ಸಾಲುಗಟ್ಟಿ ಮುಖ್ಯ ಕಾಲುವೆ ಕೆಲಸದಲ್ಲಿ ತೊಡಗಿದವು. ಅದೇರೀತಿ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಹಾಸನ, ಮಂಡ್ಯ, ಮೈಸೂರು ಭಾಗದವರೇ ಹೆಚ್ಚಾಗಿದ್ದರು.
ಬಲದಂಡೆ ಮುಖ್ಯ ಕಾಲುವೆ ಕಾಮಗಾರಿ ಆಂಧ್ರದ ಗುತ್ತಿಗೆದಾರರು ಮಾಡಿ ಮುಗಿಸಿದ ನಂತರ ಈ ಭಾಗದ ಗುತ್ತಿಗೆದಾರರು ಲೈಸನ್ಸ್ ಪಡೆದು ಉಳಿದ ವಿತರಣಾ ಕಾಲುವೆ, ಉಪವಿತರಣಾ ಕಾಲುವೆಗಳ ಕೆಲಸ ಮಾಡಲು ಮುಂದಾದರು. ಇದೆಲ್ಲದರ ಮಧ್ಯೆ ಮುಖ್ಯ ಕಾಲುವೆ, ವಿತರಣಾ ಕಾಲುವೆ, ಉಪಕಾಲುವೆ ಸೇರಿದಂತೆ ಕಾಮಗಾರಿ ಕೆಲಸ ಪೂರ್ಣಗೊಳಿಸಿ ನೀರು ಹರಿಸಲಾಯಿತು.
ಕೊಚ್ಚಿ ಹೋದ ಸಿಮೆಂಟ್ ಲೈನಿಂಗ್:  ಆದರೆ, 50 ವರ್ಷ ಬಾಳಿಕೆ ಬರಬೇಕಾದ ಕಾಲುವೆಗಳು ನೀರು ಬಿಟ್ಟ 13 ವರ್ಷಗಳಲ್ಲೇ ಕೊಚ್ಚಿ ಹೋಗಿ ಅಭದ್ರತೆಯಿಂದ ನರಳುತ್ತಿವೆ. ಕೆಲಸಕ್ಕೆ ಬಳಸಿದ ಮಣ್ಣು, ಸಿಮೆಂಟ್ ಲೈನಿಂಗ್ ಕೊಚ್ಚಿಹೋಗಿ ಅಸ್ತಿ ಪಂಜರದಂತೆ ಭಾಸವಾಗುತ್ತಿವೆ. ಇನ್ನು ಹೊಲಗಾಲುವೆಗಳು ಬಹುತೇಕ ಮುಚ್ಚಿಹೋಗಿವೆ. ಇದಕ್ಕೆ ಕಳಪೆ ಕಾಮಗಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದವು.
ರಾಜ್ಯದಲ್ಲಿ ಕಾವೇರಿ, ತುಂಗಭದ್ರಾ ಮತ್ತು ನಾರಾಯಣಪುರ ಎಡದಂಡೆ ಕಾಲುವೆಗೆ ನೀಡಿದ ನಿರ್ವಹಣೆ ಪ್ರಾತಿನಿದ್ಯ ಬಲದಂಡೆ ಕಾಲುವೆಗೆ ನೀಡುತ್ತಿಲ್ಲವೆಂಬುದು ಈ ಭಾಗದ ರೈತರ ಆರೋಪವಾಗಿತ್ತು. ಬಲದಂಡೆ ಕಾಲುವೆಯ 82ನೇ ಕಿಮೀ ನಂತರ ವಿಸ್ತರಣೆ ಮಾಡಿದರೆ ಇನ್ನೂ ಹೆಚ್ಚಿನ ನೀರನ್ನು ಕಾಲುವೆಗೆ ಬಿಡಬೇಕಾಗುತ್ತದೆ. ಆ ಸಮಯದಲ್ಲಿ ಕಾಲುವೆಗಳ ಸ್ಥಿತಿ ದೇವರೇ ಗತಿ. ಇಷ್ಟೆಲ್ಲಾ ಆರೋಪಗಳ ಮಧ್ಯೆ ಕೊನೆಗೂ ನಾರಾಯಣಪುರ ಬಲದಂಡೆ ಕಾಲುವೆಗಳ ದುರಸ್ತಿಗೆ ಕಾಲ ಕೂಡಿ ಬಂದಿದೆ.
ದುರಸ್ತಿಗೆ ರು. 11.25 ಕೋಟಿ: ನಾರಾಯಣಪುರ ಬಲದಂಡೆ ಕಾಲುವೆಗಳು ಸಂಪೂರ್ಣ ಹಾಳಾದ ಕುರಿತು ಮನಗಂಡ ಕೆಬಿಜೆಎನ್ಎಲ್ ಅಧಿಕಾರಿಗಳು ಸಂಪೂರ್ಣ ದುರಸ್ತಿಗೆ ಅಂದಾಜು ಪತ್ರಿಕೆ ಸಿದ್ಧಪಡಿಸಿ ಒಪ್ಪಿಗೆ ಪಡೆದು ದುರಸ್ತಿ ಕಾರ್ಯಕ್ಕೆ ಸುಮಾರು ರು. 11.25 ಕೋಟಿ ಟೆಂಡರ್ ಕರೆಯಲಾಗಿದೆ.
ಬಲದಂಡೆ ಮುಖ್ಯ ಕಾಲುವೆ 82 ಕಿಮೀವರೆಗೆ ಹಾಗೂ ವಿತರಣಾ ಕಾಲುವೆ ಎ ಮತ್ತು ಬಿ ಕಾಲುವೆ ಸೇರಿ 18 ವಿತರಣಾ ಕಾಲುವೆಗಳ ಹೂಳೆತ್ತಲು 1 ಕೋಟಿ 25 ಲಕ್ಷ ಮತ್ತು ರಿಪೇರಿ ಕೆಲಸಕ್ಕೆ 10 ಕೋಟಿ ಸೇರಿದಂತೆ ಒಟ್ಟು ರು. 11 ಕೋಟಿ 25 ಲಕ್ಷ ವೆಚ್ಚದ ಕಾಮಗಾರಿ ಕೆಲಸಗಳಿಗೆ ಟೆಂಡರ್ ಕರೆಯಲಾಗಿದೆ. ಮುಖ್ಯ ಕಾಲುವೆ, ವಿತರಣಾ ಕಾಲುವೆ, ಉಪವಿತರಣಾ ಕಾಲುವೆಗಳ ಹೂಳೆತ್ತುವುದು, ಡ್ರಾಪ್, ಸೇತುವೆ, ಲೈನಿಂಗ್ ಕೆಲಸಗಳ ರಿಪೇರಿ ಹಾಗೂ ನೀರು ಸೋರುವಿಕೆ ತಡೆಗಟ್ಟುವುದು ಸೇರಿದಂತೆ 88 ಕಾಮಗಾರಿ ಕೆಲಸಗಳನ್ನು ಇದರಲ್ಲಿ ಸೇರಿಸಲಾಗಿದೆ.
ಕಾಮಗಾರಿ ಕೆಲಸಗಳಿಗೆ ಟೆಂಡರ್ ಕರೆದಾಗ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆದಾರರು ಭಾಗವಹಿಸುತ್ತಾರೆ. ಕಾಮಗಾರಿಗೆ ನಿಗದಿ ಪಡಿಸಿದ ಮೊತ್ತದಲ್ಲೇ ಕೆಲಸ ಪಡೆಯಲು ಸ್ಪರ್ಧೆಯಲ್ಲಿರುವ ಗುತ್ತಿಗೆದಾರರಿಗೆ ಶೇಕಡಾವಾರು ಹಣ ನೀಡಿ ಹಿಂದೆ ಸರಿಸಿ ಸ್ಪರ್ಧೆ ಇಲ್ಲದಂತೆ ಮಾಡಿ ಕಾಮಗಾರಿ ಕೆಲಸಗಳ ಗುತ್ತಿಗೆ ಪಡೆಯುವುದು ಸಾಮಾನ್ಯ.
ಕಳಪೆ ಕಾಮಗಾರಿ: ಗುತ್ತಿಗೆದಾರರು ಸ್ಪರ್ಧೆ ಒಡ್ಡಿದರೆ ನಿಗದಿಪಡಿಸಿದ ಮೊತ್ತಕ್ಕಿಂತ ಶೇ. 30 ರಿಂದ 40 ಮೊತ್ತದಷ್ಟು ಕಡಿಮೆ ದರದಲ್ಲಿ ಕಾಮಗಾರಿ ಕೆಲಸ ಮಾಡುವುದಾಗಿ ಟೆಂಡರ್ ಹಾಕುತ್ತಾರೆ. ಇದರಿಂದ ತಾವು ಹಾಕಿದ್ದ ದುಡ್ಡು ಪಡೆಯಲು ಕಳಪೆ ಕಾಮಗಾರಿ ಮಾಡುವುದು ಅನಿವಾರ್ಯ. ಇದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಟೆಂಡರ್ ಮೂಲಕ ಕಾಮಗಾರಿ ಕೆಲಸ ನಿಗದಿಪಡಿಸುವಾಗ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ಜೊತೆಗೆ ಟೆಂಡ ರ್ ನಿಯಮ ಕಡ್ಡಾಯವಾಗಿ ಜಾರಿಗೊಳಿಸಿ ಗುಣಮಟ್ಟದ ರಿಪೇರಿ ಕೆಲಸ ಮಾಡಲು ಮುಂದಾಗಬೇಕೆಂಬುದು ರೈತರ ಒತ್ತಾಯವಾಗಿದೆ.
- ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement