ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರ, ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕ್ರಿಯೆ: ರಾಜಕೀಯ ಚುರುಕು

Vishwanath S
Updated On : 26 May 2013, 2:18 am

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ ,  ರಾಯಚೂರು ,  ಮೇ 25

ನಗರ ಮತ್ತು ಸ್ಥಳೀಯ ಸಂಸ್ಥೆಯ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚುರುಕುಗೊಂಡಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ಆರಂಭಿಸಿದ್ದು, ಮೀಸಲಾತಿ ಪ್ರಕ್ರಿಯೆಯಿಂದ ರಾಜಕೀಯ ಬಿರುಸುಗೊಂಡಿದೆ.
ಜಿಲ್ಲೆಯ ಎರಡು ನಗರಸಭೆ, ಮೂರು ಪುರಸಭೆಗಳು ಹಾಗೂ ಒಂದು ಪಪಂಗೆ ಕಳೆದ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ದೇವದುರ್ಗ ಮತ್ತು ಸಿಂಧನೂರುಗಳಲ್ಲಿ ಮತದಾರರು ಒಂದೇ ಪಕ್ಷವನ್ನು ಬೆಂಬಲಿಸಿದ್ದು, ಇನ್ನುಳಿದಂತೆ ರಾಯಚೂರು, ಮಾನವಿ, ಲಿಂಗಸ್ಗೂರು ಮತ್ತು ಮುದಗಲ್‌ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ತೆರೆಮರೆಯಲ್ಲಿ ತಂತ್ರಗಾರಿಕೆಗೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇ 25ರ ನಂತರದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆಗೆ ಚಾಲನೆ ನೀಡುವ ಕುರಿತು ತಿಳಿದು ಬಂದಿದ್ದು, ಇದರಿಂದ ಜಿಲ್ಲೆಯಲ್ಲಿ ಅತಂತ್ರ ಸ್ಥಿತಿಗೆ ಸಿಲುಕಿರುವ ಸ್ಥಳೀಯ ಸಂಸ್ಥೆಗಳಲ್ಲಿಯೂ ಅಧಿಕಾರ ಪಡೆಯಲು ತೆರೆಮರೆಯಲ್ಲಿ ತಂತ್ರಗಾರಿಕೆಗೆ ತೊಡಗಿದೆ.
ಈಗಾಗಲೇ ಸಿಂಧನೂರು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆತಿದೆ. ಇನ್ನುಳಿದಂತೆ ದೇವದುರ್ಗದಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿದೆ. ರಾಯಚೂರು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆತಿಲ್ಲ. 35ವಾರ್ಡುಗಳಲ್ಲಿ ಕಾಂಗ್ರೆಸ್‌ಗೆ 14 ಸ್ಥಾನ ದೊರೆತಿದ್ದು, ಜೆಡಿಎಸ್-9, ಬಿಜೆಪಿ7 ಹಾಗೂ ಪಕ್ಷೇತರರು ಐದು ಕಡೆ ಗೆದ್ದಿದ್ದಾರೆ. ಅಧಿಕಾರ ಹಿಡಿಯಲು 19ಸ್ಥಾನ ಪಡೆಯುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಹರಸಾಹಸ ನಡೆಸಿದೆ.
ಈ ಮಧ್ಯೆ ಮಾಜಿ ಶಾಸಕ ಹಾಗೂ ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಪಾಪಾರೆಡ್ಡಿ ಅವರಿಂದಾಗಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಮಾಜಿ ಶಾಸಕ ಪಾಪಾರೆಡ್ಡಿ ಅವರ ಅನೇಕ ಬೆಂಬಲಿಗರು ನಗರಸಭೆಯ ಸದಸ್ಯರಾಗಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಸದಸ್ಯರನ್ನು ಸೆಳೆಯಲ ಆರಂಭ: ಈ ಮಧ್ಯೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸರ್ಕಾರದ ಪೌರಾಡಳಿತ ಸಚಿವರ ಮೇಲೆ ಒತ್ತಡ ಹೇರುವ ಮೂಲಕ ಮೀಸಲಾತಿ ನಿಗದಿಯಲ್ಲಿ ಅನುಕೂಲಕರ ವಾತಾವರಣ ನಿರ್ಮಿಸುವಂತೆ ಪ್ರಭಾವ ಬೀರುತ್ತಿದ್ದಾರೆಂದು ಗೊತ್ತಾಗಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಲಿಂಗಸ್ಗೂರು, ಮಾನವಿ, ರಾಯಚೂರು ಹಾಗೂ ಮುದಗಲ್ ಗಳಲ್ಲಿ ಅಧಿಕಾರ ಹಿಡಿಯಲು ಅಗತ್ಯವಿರುವ ಸಂಖ್ಯೆಯ ಸದಸ್ಯರನ್ನು ಸೆಳೆಯಲು ಈಗಲೇ ತಂತ್ರಗಾರಿಕೆ ಆರಂಭಿಸಲಾಗಿದೆ.
ಒಂದೆಡೆ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿಯೂ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಲು ಎಲ್ಲ ತಂತ್ರಗಳನ್ನು ಅನುಸರಿಸುತ್ತಿದ್ದು, ಮೀಸಲಾತಿಯ ನೆರವು ಪಡೆಯಲೂ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement