ಮುಖ್ಯಮಂತ್ರಿ ಹೇಳಿಕೆಗೆ ಖಂಡನೆ
ಗುಲ್ಬರ್ಗ: ಪುಣ್ಯಕ್ಷೇತ್ರಗಳಾದ ಗೋಕರ್ಣ ಪೀಠ ಮತ್ತು ಉಡುಪಿಯ ಕೃಷ್ಣ ಮಠವನ್ನು ರಾಜ್ಯ ಸರ್ಕಾರ ತಮ್ಮ ವಶಕ್ಕೆ ತೆಗೆದುಕೊಂಡು ಮುಜರಾಯಿ ಇಲಾಖೆಗೆ ಒಳಪಡಿಸುತ್ತೆವೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಗಾಯತ್ರಿ ಬ್ರಾಹ್ಮಣ ಮಹಿಳಾ ಟ್ರಸ್ಟಿನ ಅಧ್ಯಕ್ಷೆ ರಾಜಶ್ರೀ ದೇಶಮುಖ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪುಣ್ಯಕ್ಷೇತ್ರಗಳಿಗೆ ತಮ್ಮದೇ ಆದ ಇತಿಹಾಸವಿದೆ. ಧಾರ್ಮಿಕ ಸ್ಥಳಗಳನ್ನು ಸರ್ಕಾರ ಮುಜರಾಯಿ ಇಲಾಖೆಗೆ ಒಳಪಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಮಫಲಕ ಧ್ವಂಸ: ಖಂಡನೆ
ದೇವದುರ್ಗ: ತಾಲೂಕಿನ ಅರಕೇರಾ ಗ್ರಾಮದಲ್ಲಿ ವಾಲ್ಮೀಕಿ ನಾಮಫಲಕವನ್ನು ಕೆಲ ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆಯನ್ನು ವಾಲ್ಮೀಕಿ ನಾಯಕ ಸಂಘದ ಕರಿಗುಡ್ಡ ಘಟಕ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಆಂಜನೇಯ್ಯ ಗಣೇಕಲ್, ಹನುಮಂತ್ರಾಯ ಗಂಗೆ ಮತ್ತಿತರರು, ಮೇ 22 ರಂದು ರಾತ್ರಿ ಅರಕೇರಾ ಗ್ರಾಮದಲ್ಲಿರುವ ವಾಲ್ಮೀಕಿಯ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಅಪಮಾನ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ತಪ್ಪಿಸ್ಥತರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ನಿಯಮಬಾಹಿರ ಉನ್ನತ ವ್ಯಾಸಂಗ; ದಸಂಸ ಆಗ್ರಹ
ರಾಯಚೂರು: ನಿಯಮಬಾಹಿರವಾಗಿ ಉನ್ನತ ವ್ಯಾಸಂಗ (ಬಿ.ಇಡಿ) ಮಾಡಿರುವ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಪ್ಪ ದಿನ್ನಿ ಹಾಗೂ ತಾಲೂಕು ಸಂಚಾಲಕ ಹನುಮಂತ ಅರೋಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಆಗ್ರಹಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಉನ್ನತ ವ್ಯಾಸಂಗಕ್ಕಾಗಿ ತರಬೇತಿಗೆ ತೆರಳಿದ ಸಮಯದಲ್ಲಿ ವಿಧಿಸಿದ ಷರತ್ತುಗಳನ್ನು ಪಾಲಿಸದೆ, ಇಲಾಖೆ ನಿಯಮ ಗಾಳಿಗೆ ತೂರಿ ಕರ್ತವ್ಯಲೋಪವೆಸಗಿದ ಮತ್ತು ಕರ್ತವ್ಯ ನಿರ್ವಹಿಸದಿದ್ದರೂ ನಿಯಮಬಾಹಿರವಾಗಿ ವೇತನ ಪಡೆದ ಶಿಕ್ಷಕರಿಗೆ ನಿಯಮಾನುಸಾರ ಶೋಕಾಸ್ ನೋಟಿಸ್ ಜಾರಿಗೊಳಿಸಿ ಕರ್ನಾಟಕ ಸೇವಾ ನಿಯಮಗಳ ಅನ್ವಯ ತಪ್ಪಿದಲ್ಲಿ ಶಿಸ್ತುಕ್ರಮ ಕೈಗೊಂಡು ಅಪರ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಮಾ.16 ರಂದು ಪತ್ರ ಬರೆದಿದ್ದಾರೆ. ಅದರಂತೆ ಪದವಿ ಪಡೆದ 17 ಜನ ಶಿಕ್ಷಕರ ವಿರುದ್ಧ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮೂರು ಪ್ರಶ್ನಾವಳಿಯಲ್ಲಿ ಕಾರಣ ಕೇಳುವ ನೋಟೀಸು ಜಾರಿ ಮಾಡಿ ಶಿಕ್ಷಕರಿಂದ ಹೇಳಿಕೆ ಪಡೆಯಲಾಗಿದೆ. ಆದರೆ ನಿಯಮ ಬಾಹಿರವಾಗಿ ಉನ್ನತ ವ್ಯಾಸಂಗ ಮಾಡಿದ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಅಧಿಕಾರ ತಮಗಿದ್ದರೂ ಪುನಃ ಅಪರ ಆಯುಕ್ತರಿಗೆ ನಿರ್ದೇಶನಕ್ಕಾಗಿ ಪತ್ರ ಬರೆದಿರುವುದು ಸಮಂಜಸವಲ್ಲ. ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಮ್ಮ ವಿರುದ್ಧ ಇಲಾಖೆ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಿಂಧನೂರು; ಮದ್ಯ ವ್ಯಸನಿ ಆತ್ಮಹತ್ಯೆ
ರಾಯಚೂರು: ಸಿಂಧನೂರು ನಗರದ ನಟರಾಜ ಕಾಲನಿಯ ಮದ್ಯ ವ್ಯಸನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತನನ್ನು ಭೀಮಸೇನ ರಾವ್ ದೇಸಾಯಿ ಎಂದು ಗುರುತಿಸಲಾಗಿದೆ. ಇವರು ಮದ್ಯ ವ್ಯಸನಿಯಾಗಿದ್ದು, ಮದ್ಯದ ಚಟ ಬಿಡುವಂತೆ ಮಕ್ಕಳು ಬುದ್ಧಿ ಮಾತು ಹೇಳಿದ್ದರಿಂದ ಅದರಿಂದ ಮನೆಯಿಂದ ಹೊರಗೆ ಹೋಗಿ ರಾತ್ರಿ ವೇಳೆ ಸಿಂಧನೂರು ನಗರದಲ್ಲಿ ಹೈದರಾಬಾದ್ ಹೋಟೆಲ್ ಮುಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಟಕಾ: ಒಬ್ಬನ ಬಂಧನ
ರಾಯಚೂರು: ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಬಾಳೇಶ ಎಂದು ಗುರುತಿಸಲಾಗಿದೆ. ಈತ ಗ್ರಾಮದ ಹಳೇ ಸಿನೇಮಾ ಟಾಕೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ವೇಳೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ಅವನಿಂದ ನಗದು ರು. 520 ಜಪ್ತಿ ಮಾಡಿದ್ದಾರೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೂಜು: ನಾಲ್ವರ ಬಂಧನ
ರಾಯಚೂರು: ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ನಲ್ಲಿ ಇಸ್ಪೀಟ್ ಆಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗ್ರಾಮದ ನಾಗರಾಜ ಮತ್ತಿತರೆ ಮೂವರೆಂದು ಗುರುತಿಸಲಾಗಿದೆ. ಇವರು ಗ್ರಾಮದ ಹೊಲಮೊಂದರಲ್ಲಿ ಜೂಜಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 10200 ರು. ಜಪ್ತಿ ಮಾಡಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.