ಕುನ್ನಟಗಿ ಕೆರೆಯಲ್ಲಿ ಮುಳುಗಿ ಬಾಲಕ ಸಾವು
ರಾಯಚೂರು: ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.
ಮೃತನನ್ನು ವೀರೇಶ್ ಎಂದು ಗುರುತಿಸಲಾಗಿದೆ. ಈತ ಗ್ರಾಮದ ಪಾಪಾರಾವ್ ಎಂಬುವವರ ಹೊಲದ ಕೆರೆಯಲ್ಲಿ ಎಮ್ಮೆ, ಎಮ್ಮೆ ಕರು ಹಾಗೂ ಕುರಿ ಮರಿಗಳಿಗೆ ನೀರು ಕುಡಿಸುತ್ತಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ರಾಯಚೂರು: ಮಾನವಿ ತಾಲೂಕಿನ ಪೋತ್ನಾಳ ಗ್ರಾಮದ ಜೆಸ್ಕಾಂ ಕಚೇರಿ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಸಿಂಧನೂರು- ಪೋತ್ನಾಳ ಮುಖ್ಯ ರಸ್ತೆಯ ಪೋತ್ನಾಳ್ ಸಮೀಪದ ಜೆಸ್ಕಾಂ ಕಚೇರಿಯ ಹತ್ತಿರ ರಸ್ತೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಅಂದಾಜು 30 ರಿಂದ 35 ವರ್ಷ ವಯಸ್ಸಿನವನು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಈತನ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೂಜು, ಜಗಳ: ವ್ಯಕ್ತಿ ಕೊಲೆ
ರಾಯಚೂರು: ತಾಲೂಕಿನ ಶಾಖವಾದಿ ಗ್ರಾಮದಲ್ಲಿ ಜೂಜಾಟದಲ್ಲಿ ಉಂಟಾದ ಜಗಳ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತನನ್ನು ಗ್ರಾಮದ ನಾಗರಾಜ್(35) ಎಂದು ಗುರುತಿಸಲಾಗಿದೆ.
ಈತ ಗ್ರಾಮದ ದೊಡ್ಡಹನುಮಂತ, ಮಲ್ಲೇಶ್, ಶಾಂತು ಎಂಬುವವರು ಜೂಜಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಗೊಂಡಿದ್ದು, ಜಗಳದ ವೇಳೆ ನಾಗರಾಜ್ ಮೇಲೆ
ನಡೆದ ಮಾರಣಾಂತಿಕ ಹಲ್ಲೆಯಿಂದಾಗಿ ಆತ ಮೃತಪಟ್ಟಿದ್ದು, ಆರೋಪಿಗಳು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.