ಪಡಿತರ ಅಕ್ರಮ: ಮೊಕದ್ದಮೆ ದಾಖಲಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 26
ಹೊರರಾಜ್ಯದವರಿಗೂ ಅಕ್ರಮವಾಗಿ ಪಡಿತರ ಚೀಟಿಗಳನ್ನು ವಿತರಿಸುವುದು ಸೇರಿ ನಾನಾ ರೀತಿಯಲ್ಲಿ ಆಹಾರ ಧಾನ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ನಗರದ ಹರಿಜನವಾಡದ ಲಕ್ಷ್ಮಪ್ಪ ನ್ಯಾಯಬೆಲೆ ಅಂಗಡಿ ಹಾಗೂ ಗಣೇಶ ನ್ಯಾಯಬೆಲೆ ಅಂಗಡಿಗಳ ಮಾಲಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇವರೊಂದಿಗೆ ಶಾಮೀಲಾಗಿ ಅಕ್ರಮಕ್ಕೆ ಅವಕಾಶ ಕಲ್ಪಿಸಿದ ಜಿಲ್ಲಾ ಆಹಾರ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಡಾ. ಬಾಬು ಜಗಜೀವನರಾಮ ಆದರ್ಶ ಸಂಘ ಆಗ್ರಹಿಸಿದೆ.
ಈ ಕುರಿತು ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನರಸಿಂಹಲು ಮಾಡಗಿರಿ, ಹರಿಜನವಾಡದಲ್ಲಿರುವ ಈ ಎರಡೂ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಕ್ರಮ ಪಡಿತರ ಚೀಟಿಗಳ ಮೂಲಕ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಕೋಟ್ಯಂತರ ರು. ಗಳಿಸುತ್ತಿದ್ದಾರೆಂದು ಆರೋಪಿಸಿದರು.
ಸಂಬಂಧಿಗಳ ವಿಳಾಸದಲ್ಲಿ: ನೆರೆಯ ಆಂಧ್ರದ ಗದ್ವಾಲ್ ನಗರದ ನಿವಾಸಿಗಳನ್ನು ಕರೆತಂದು ನಗರದಲ್ಲಿ ಅವರ ಸಂಬಂಧಿಗಳ ವಿಳಾಸ ಮತ್ತಿತರೆ ದಾಖಲೆಗಳನ್ನು ಒದಗಿಸಿ ಪಡಿತರ ಚೀಟಿ ಸಿದ್ಧಪಡಿಸಲಾಗಿದೆ. ಅದೇ ರೀತಿ ಅನೇಕ ಸರ್ಕಾರಿ ನೌಕರರಿಗೂ ಸಹ ಇವರು ಅಂತ್ಯೋದಯ ಕಾರ್ಡ್ಗಳನ್ನು ನೀಡುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರು ಸೇರಿ ಎಲ್ಲ ಹಿರಿಯ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆಂದು ದೂರಿದರು.
ಫೋಟೋ, ಜಾತಿಗಳ ಬದಲಾವಣೆ: ಸಾವಿರಾರು ಸಂಖ್ಯೆಯಲ್ಲಿ ಖೊಟ್ಟಿ ಹಾಗೂ ಒಬ್ಬ ವ್ಯಕ್ತಿಯ ಫೋಟೋ ಬಳಸಿ ಬೇರೆ ಬೇರೆ ಹೆಸರುಗಳಲ್ಲಿ ಪಡಿತರ ಚೀಟಿ ತಯಾರಿಸಲಾಗಿದೆ. ಅಷ್ಟೇ ಅಲ್ಲ ಹಿಂದೂಗಳಿಗೆ ಮುಸ್ಲಿಂರ ಹಾಗೂ ಮುಸ್ಲಿಂ ಜಾತಿಗೆ ಸೇರಿದವರ ಫೋಟೋವನ್ನು ಹಿಂದೂಗಳ ಹೆಸರು ಬಳಸಿ ಪಡಿತರ ಚೀಟಿ ಸಿದ್ಧಪಡಿಸಿ ಅವುಗಳ ಮೂಲಕ ಹೆಚ್ಚಿನ ಆಹಾರ ಧಾನ್ಯ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುವ ಅಕ್ರಮ ಕಾರ್ಯ ನಡೆಸಿರುವ ಗಣೇಶ ನ್ಯಾಯಬೆಲೆ ಅಂಗಡಿ ಮತ್ತು ಲಕ್ಷ್ಮಪ್ಪ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ರಾಜಕೀಯ ವ್ಯಕ್ತಿಗಳ ಬೆಂಬಲವಿದೆ ಎಂದು ಆರೋಪಿಸಿದರು.
800 ಪಡಿತರ: ಸರ್ಕಾರದ ಆದೇಶದಂತೆ ಒಂದು ಪ್ರದೇಶದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಕೇವಲ 500 ಪಡಿತರ ಚೀಟಿಗಳಿರಬೇಕು. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪಡಿತರ ಚೀಟಿಗಳಿದ್ದಲ್ಲಿ ಅಂಥ ಮತ್ತೊಂದು ನ್ಯಾಯಬೆಲೆ ಅಂಗಡಿ ಆರಂಭಿಸಬೇಕೆಂದು ಹೇಳಲಾಗಿದೆ. ಆದರೆ ಈ ಎರಡೂ ನ್ಯಾಯಬೆಲೆ ಅಂಗಡಿಗಳಿಗೆ ಸುಮಾರು 800 ಪಡಿತರ ಚೀಟಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ವಿಚಾರ ಗೊತ್ತಿದ್ದೂ ಆಹಾರ ಇಲಾಖೆಯ ಅಧಿಕಾರಿಗಳು ಮೌನವಹಿಸಿರುವುದು ಅವರೂ ಈ ಅಕ್ರಮದಲ್ಲಿ ಶಾಮೀಲಾಗಿರುವುದು ಸ್ಪಷ್ಟಗೊಳಿಸಿದೆ ಎಂದು ದೂರಿದರು.
ಈ ಅಕ್ರಮದ ಬಗ್ಗೆ ಸೋಮವಾರವೇ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗುತ್ತದೆ. ಗಣೇಶ ನ್ಯಾಯಬೆಲೆ ಅಂಗಡಿ ಮತ್ತು ಲಕ್ಷ್ಮಪ್ಪ ನ್ಯಾಯಬೆಲೆ ಅಂಗಡಿ ಮಾಲಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಹರಿಜನವಾಡ ಪ್ರದೇಶದಲ್ಲಿನ ಮೂಲ ನಿವಾಸಿಗಳಿಗೆ ಸಮರ್ಪಕ ಆಹಾರ ಧಾನ್ಯ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲಿಕರಿಗೆ ಸೂಚನೆ ನೀಡುವಂತೆಯೂ ಆಗ್ರಹಿಸಲಾಗುತ್ತದೆ ಎಂದು ನರಸಿಂಹಲು ಮಾಡಗಿರಿ ತಿಳಿಸಿದರು.
ಸಂಘದ ಪ್ರಮುಖರಾದ ರವಿಕುಮಾರ್, ಕೃಷ್ಣ ಭಂಡಾರಿ, ಬಂಡೆಪ್ಪ, ರಮೇಶ್ ಇದ್ದರು.