ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪುನರ್ವಸತಿ ಗ್ರಾಮಗಳಿಗಿಲ್ಲ ಮೂಲ ಸೌಕರ್ಯ

Lingaraj Badiger
Updated On : 27 May 2013, 11:11 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 26
ತಾಲೂಕಿನ ಬಸವ ಸಾಗರ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆಯಾದ ಪುನರ್ವಸತಿ ಗಡಿ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಮೂಲ ಸೌಕರ್ಯಗಳು ಮರಿಚೀಕೆಯಾಗಿದ್ದು ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಗಡಿ ಗ್ರಾಮಗಳಾದ ತೊಂಡಿಹಾಳ, ಉಪನಾಳ- ಅಂಕನಾಳ, ಪಲಗಲದಿನ್ನಿ ಗ್ರಾಮಗಳು ಕೃಷ್ಣಾ ನದಿ ತಟದಲ್ಲಿವೆ. ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆಯಾದ ಗ್ರಾಮಗಳ ಜನರಿಗೆ ಸರ್ಕಾರ ಪುನರ್ವಸತಿ ಸೌಕರ್ಯ ಕಲ್ಪಿಸಿದ್ದು ರಸ್ತೆಗಳ ದುರಸ್ತಿ ಮರೆತಿದೆ.
ಎತ್ತುಗಳಿಗೂ ನಡೆಯಲಾಗದ ಸ್ಥಿತಿ: ಪುನರ್ವಸತಿ ಗ್ರಾಮಗಳಾದ ಅಂಕನಾಳ- ಉಪನಾಳ ಗ್ರಾಮಗಳಿಗೆ ಹಲವು ದಶಕಗಳ ಹಿಂದೆ ರಸ್ತೆಗೆ ಹಾಕಲಾದ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ರಸ್ತೆಯ ಮೇಲೆ ಗುಂಡಿಗಳು ಬಿದ್ದಿವೆ. ಕಂಕರುಗಳು ತೇಲಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರೈತರು ರಸ್ತೆ ಮೇಲೆ ಚಕ್ಕಡಿಯನ್ನೂ ಓಡಿಸದಂತಾಗಿದೆ. ಎತ್ತುಗಳು ಕಂಕರ್ ಎದ್ದಿರುವ ರಸ್ತೆ ಮೇಲೆ ನಡೆಯಲು ಹಿಂದೇಟು ಹಾಕುತ್ತಿವೆ. ಇದರಿಂದ ಜಮೀನುನಲ್ಲಿರುವ ಸೊಪ್ಪೆ, ಹೊಟ್ಟನ್ನು ತರಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತ ಸಂಗಪ್ಪ.
ಕುಡಿವ ನೀರಿನ ಸಮಸ್ಯೆ: ಉಪನಾಳ- ಅಂಕನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ವಿದ್ಯುತ್ ಸಮರ್ಪಕ ಸರಬರಾಜಿಲ್ಲದೆ ಗ್ರಾಮಗಳಲ್ಲಿ ನೀರು ಬರುವುದಿಲ್ಲ. ಇದರಿಂದ ಬಾವಿಯ ನೀರನ್ನು ಇಲ್ಲಿಯ ಜನತೆ ಉಪಯೋಗಿಸುತ್ತಾರೆ. ಪಕ್ಕದಲ್ಲಿಯೇ ನದಿಯಿದ್ದರೂ ನೀರಿನ ಸಂಕಷ್ಟ ತಪ್ಪಿಲ್ಲ.
ಸಾರಿಗೆ: ರಸ್ತೆಗಳು ತೀವ್ರ ಹದಗೆಟ್ಟಿರುವುದರಿಂದ ಲಿಂಗಸ್ಗೂರು ತಾಲೂಕು ಕೇಂದ್ರದಿಂದ 50- 60 ಕಿಮೀ ದೂರವಿರುವ ಗಡಿ ಗ್ರಾಮಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ಸುಗಳ ವ್ಯವಸ್ಥೆಯಿಲ್ಲ. ವಾಯುವ್ಯ ಸಾರಿಗೆ ನಿಗಮದಿಂದ ಹೆಚ್ಚಿನ ಸಂಖ್ಯೆಯ ಬಸ್ಸುಗಳ ಓಡಾಟವಿದ್ದು ಇದರಿಂದ ಗಡಿ ಗ್ರಾಮಗಳ ಜನತೆ ಬಾಗಲಕೋಟೆ ಜಿಲ್ಲೆಯ ಹುನಗುಂದ, ಕರಡಿ, ಇಳಕಲ್‌ಗೆ ನಿತ್ಯದ ವ್ಯವಹಾರಕ್ಕೆ ತೆರಳುತ್ತಾರೆ.
ಆರೋಗ್ಯ ಸೇವೆಯೂ ಮರೀಚಿಕೆ: ಗ್ರಾಮಗಳಲ್ಲಿನ ಜನರು ಅನಾರೋಗ್ಯಕ್ಕೆ ಒಳಗಾದರೆ ಸಕಾಲಕ್ಕೆ ತುರ್ತು ಚಿಕಿತ್ಸೆ ಸಿಗುವುದೇ ಇಲ್ಲ. ಅಲ್ಲದೇ ಗ್ರಾಮಗಳಲ್ಲಿ ಎಎನ್‌ಎಂ ಕೊಠಡಿಯಿದ್ದರೂ ನರ್ಸ್‌ಗಳೂ ಇರುವುದಿಲ್ಲ. ಇದರಿಂದ ಬೇರೆ ದಾರಿಯಿಲ್ಲದೆ ಸುಮಾರು 20 ಕಿಮೀ ದೂರದ ಊರುಗಳಿಗೆ ತೆರಳುವುದು ಅನಿವಾರ್ಯವಾಗಿದೆ.
ಆದರೆ ಶೀಘ್ರದಲ್ಲೇ ತೆರಳಬೇಕೆಂದರೆ ರಸ್ತೆಗಳೂ ಹದಗೆಟ್ಟು ಅದೂ ಸಾಧ್ಯವಾಗುತ್ತಿಲ್ಲ. ಅಲ್ಲದೇ ಕಂಕರ್‌ಗಳು ತೇಲಿದ್ದು, ಕಾಲುನಡಿಗೆಯಲ್ಲಿ ಊರುಗಳಿಗೆ ತೆರಳಲು ಅಡಿಗಡಿಗೆ ಎಡವುತ್ತಾ ಸಾಗಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಸಂಚಾರಕ್ಕೆ ಕಂಕರ್ ಸವಾಲು: ರಸ್ತೆ ದುರಸ್ತಿ ಮಾಡಲು ಅನೇಕ ವರ್ಷಗಳ ಹಿಂದೆಯೇ ರಸ್ತೆ ಬದಿ ಕಂಕರ್‌ಗಳನ್ನು ಹಾಕಿದ್ದಾರೆ. ಆದರೆ ದುರಸ್ತಿ ಆಗದೆ ಸಂಚಾರಕ್ಕೆ ಕಂಕರ್‌ಗಳು ಅಡ್ಡಿಯಾಗಿವೆ. ರಸ್ತೆ ದುರಸ್ತಿ ಕೈಗೊಳ್ಳದಿದ್ದರೆ ರಸ್ತೆ ಬದಿ ಕಂಕರ್ ಹಾಕಿದ್ದಾದರೂ ಏತಕ್ಕೆ ಎಂದು ಪ್ರಶ್ನಿಸುತ್ತಿದ್ದಾರೆ ಜನತೆ.
ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ರಸ್ತೆ ನಿರ್ಮಾಣಕ್ಕೆ ಮುಂದಾಗಿ ಜನತೆಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement