ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾದರ್ಲಿಗೆ ಸಚಿವ ಸ್ಥಾನ ಸಿಗದಿದ್ರೆ ಸಾಮೂಹಿಕ ರಾಜಿನಾಮೆ

Lingaraj Badiger
Updated On : 27 May 2013, 11:16 am

ಕ.ಪ್ರ. ವಾರ್ತೆ, ಸಿಂಧನೂರು, ಮೇ 26
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ತಾಪಂ, ಜಿಪಂ, ನಗರಸಭೆ, ಎಪಿಎಂಸಿ ಸದಸ್ಯರು ಬೆದರಿಕೆ ಹಾಕಿದ್ದಾರೆ.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಾಗೀರದಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾಫರ್ ಜಾಗೀರದಾರ, ಕಳೆದ 45 ವರ್ಷಗಳಿಂದ ಸಿಂಧನೂರಿಗೆ ಸಚಿವ ಸ್ಥಾನ ದೊರಕಿಲ್ಲ. ಮೊದಲ ಹಂತದ ಸಚಿವ ಸಂಪುಟದ ವಿಸ್ತರಣೆಯಲ್ಲಿ ಹಂಪನಗೌಡರಿಗೆ ಕೊನೆಯ ಹಂತದಲ್ಲಿ ಸ್ಥಾನ ಕೈತಪ್ಪಿದೆ. ಆಡಳಿತ ಪಕ್ಷದ ಶಾಸಕರು ಆಯ್ಕೆಯಾಗುವುದು ಸಿಂಧನೂರು ತಾಲೂಕಿಗೆ ಬಸವಂತರಾಯಗೌಡರನ್ನು ಹೊರತುಪಡಿಸಿದರೆ ಇದುವರೆಗೂ ಯಾರೂ ಆಯ್ಕೆಯಾಗಿರಲಿಲ್ಲ. ಆ ಶಾಪದಿಂದ ವಿಮೋಚನೆಗೊಂಡ ಸಿಂಧನೂರು ತಾಲೂಕಿಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗಬಹುದೆಂಬ ವಿಶ್ವಾಸವಿತ್ತು.
ಸಾಮೂಹಿಕ ರಾಜಿನಾಮೆ ಬೆದರಿಕೆ: ಆದರೆ ಮೊದಲ ಹಂತದಲ್ಲಿ ಹುಸಿಯಾಗಿದೆ. ಎರಡನೇ ಹಂತದಲ್ಲಿ ವಿಸ್ತರಣೆಯಾಗುವ ಸಂಪುಟದಲ್ಲಿ ಬಾದರ್ಲಿಯವರಿಗೆ ಸಚಿವ ಸ್ಥಾನ ದೊರೆಯದಿದ್ದರೆ ಎಲ್ಲ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜಿನಾಮೆ ನೀಡುವುದಾಗಿ ಹೇಳಿದರು.
ಮಂತ್ರಿ ಮಾಡುವ ಭರವಸೆ ನೀಡಿದ್ದರು: ಯುವ ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ಬಸವರಾಜ ಹಿರೇಗೌಡರ ಮಾತನಾಡಿ, ಈ ಬಾರಿ ನಡೆದ ಚುನಾವಣೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸಿಂಧನೂರಿನಿಂದಲೇ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಸಿದ್ದರಾಮಯ್ಯ ಹಾಗೂ ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಹರ್ಷದ್ ರಿಜ್ವಾನ್ ಬಾದರ್ಲಿಯವರನ್ನು ಗೆಲ್ಲಿಸಿದರೆ ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಮೊದಲ ಸಂಪುಟ ವಿಸ್ತರಣೆಯಲ್ಲಿ ಹುಸಿಯಾಗಿದೆ. ಎರಡನೇ ವಿಸ್ತರಣೆವರೆಗೆ ಕಾದು ನೋಡಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುವುದಾಗಿ ಹೇಳಿದರು.
2ನೇ ಬಾರಿ ಮನವಿ: ಜಿಪಂ ಸದಸ್ಯ ಶಿವನಗೌಡ ಎಲೆಕೂಡ್ಲಗಿ ಮಾತನಾಡಿ, ಹಂಪನಗೌಡರನ್ನು ಮಂತ್ರಿ ಮಾಡಲು ತಾಲೂಕು ಕಾಂಗ್ರೆಸ್ ಸಮಿತಿ, ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದವು. ಈಗ ಮತ್ತೊಮ್ಮೆ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಎರಡನೇ ಹಂತದಲ್ಲಿ ಸಚಿವ ಸ್ಥಾನ ನೀಡಲು ಮನವಿ ಮಾಡಿದ್ದಾಗಿ ಹೇಳಿದರು.
ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲರು ಸಹ ಹಂಪನಗೌಡರಿಗೆ ಬೆಂಬಲಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದರೆ ಮಸ್ಕಿ ಕಾಂಗ್ರೆಸ್ ಘಟಕದ ಸರ್ವ ಪದಾಧಿಕಾರಿಗಳು ರಾಜಿನಾಮೆ ನೀಡುವುದಾಗಿ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಸ್ಕಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಎಪಿಎಂಸಿ ಅಧ್ಯಕ್ಷ ಕರಿಯಪ್ಪ ಹರೆಟನೂರ, ನಗರಸಭೆ ಸದಸ್ಯರಾದ ಪ್ರಭುರಾಜ, ವೆಂಕಟರಾವ್ ಬಂಡಿ, ಶೇಖರಪ್ಪ ಗಿಣಿವಾರ ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಕನ್ನಾರಿ, ಲಿಂಗರಾಜ ಪಾಟೀಲ್ ಹಂಚಿನಾಳ ಕ್ಯಾಂಪ್, ಶಿವಕುಮಾರ ಜವಳಿ, ಶಿವಬಸನಗೌಡ ಮೂಲಿಮನಿ, ನಗರಸಭೆ ಮಾಜಿ ಸದಸ್ಯ ಎಸ್.ಶರಣೇಗೌಡ, ಅಲ್ಲಮಪ್ರಭು, ತಿಪ್ಪಣ್ಣ, ನನ್ನುಸಾಬ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement