ಪೈಪ್ಲೈನ್ ಕಾಮಗಾರಿ ಪರಿಶೀಲನೆ
ಸಿಂಧನೂರು: ಸಿಂಧನೂರಿನ ಬಪ್ಪೂರ ರಸ್ತೆ ಬಳಿ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಯನ್ನು ನಗರಸಭೆ ಪೌರಾಯುಕ್ತ ನಾಸೀರ್ ಅಲಿ ಭೇಟಿ ನೀಡಿ ಪರಿಶೀಲಿಸಿದರು.
ಇತ್ತೀಚೆಗೆ ನಡೆದ ಕುಡಿವ ನೀರಿನ ಕುರಿತು ನಗರಸಭೆಯಲ್ಲಿ ನಡೆದ ತುರ್ತು ಸಭೆಯಲ್ಲಿ ತೀರ್ಮಾನಿಸಿದಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಡಿಯ 25 ಲಕ್ಷ ವೆಚ್ಚದ ಕುಡಿವ ನೀರಿನ ಪೈಪ್ಲೈನ್ ಕಾಮಗಾರಿಯನ್ನು ವೀಕ್ಷಿಸಿದ ನಾಸೀರ್ ಅಲಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿವ ನೀರಿನ ಪೈಪ್ಲೈನ್ ಕಾಮಗಾರಿ ಆರಂಭಿಸಲಾಗಿದ್ದು ಹಳ್ಳದ ಮೂಲಕ ಕೆರೆಗೆ ನೀರು ಸಂಗ್ರಹಿಸಲಾಗುವುದು. ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ದೇವರಾಜ ಮಿಲ್ನಿಂದ ಬಪ್ಪೂರ ರಸ್ತೆಯ ಮಾರ್ಗದಲ್ಲಿ 2.5 ಕಿ.ಮೀ. ಅಂತರದಲ್ಲಿ ಪೈಪ್ಲೈನ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಂದಾಯ ಅಧಿಕಾರಿ ಗುಂಡಪ್ಪ ಸಾಲಗುಂದ, ರೋಜಗಾರ ಯೋಜನೆ ಸಿಇಒ ದುರುಗಪ್ಪ ಹಸಮಕಲ್, ಕಂದಾಯ ನಿರೀಕ್ಷಕ ಮುನಿಸ್ವಾಮಿ ಇದ್ದರು.