ರೈತರಲ್ಲಿ ಬಿಸಿಲ ಬೇಗೆ ತಂದ ಆತಂಕ
ಸಿಂಧನೂರು: ತಾಪಮಾನ ಹೆಚ್ಚಳ ಎಲ್ಲರಿಗೂ ಪೆಟ್ಟು ನೀಡುತ್ತಿದೆ. ಬೆಳಗ್ಗೆ 8 ಗಂಟೆಯ ವೇಳೆಗೆ ನಡು ಮಧ್ಯಾಹ್ನವಾಯಿತೆಂಬ ಅನುಭವ ನೀಡುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಝಳ ಹೆಚ್ಚಾಗಿದ್ದು ರೈತ ಸಮುದಾಯ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ತೀವ್ರ ಬಿಸಿಲಿನ ಕಾರಣ ಬೇಸಾಯ ಮಾಡಲು ಹಿಂಜರಿಯುತ್ತಿರುವ ರೈತರಲ್ಲಿ ಕೆಲವರು ಟ್ರ್ಯಾಕ್ಟರ್ ಮೂಲಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಮುಂಗಾರು ಹಂಗಾಮಿಗೆ ಎಲ್ಲ ರೀತಿಯಿಂದ ಸಜ್ಜಾಗಬೇಕಾಗಿದ್ದ ರೈತರಲ್ಲಿ ಈ ಬಾರಿ ಉತ್ಸಾಹ ತೋರಿಸುತ್ತಿಲ್ಲ. ಹಿರೇಬೇರಿಗಿ, ದಿನಸಮುದ್ರ, ಹಸಮಕಲ್, ಗೋನಾಳ, ಹತ್ತಿಗುಡ್ಡ, ತುರ್ವಿಹಾಳ, ಚಿಕ್ಕಬೇರಿಗಿ ಹಲವು ಗ್ರಾಮಗಳಲ್ಲಿ ಬಿಸಿಲಿನ ಕಾರಣ ರೈತರು ಕೃಷಿ ಚಟುವಟಿಕೆಗಳನ್ನೇ ಸ್ಥಗಿತಗೊಳಿಸಿದ್ದಾರೆ.
ಬೇಸಾಯಕ್ಕೆ ತೊಂದರೆ: ಮಸಾರಿ, ಕಪ್ಪು ಭೂಮಿ ಹದಗೊಳ್ಳಲು ಉತ್ತಮ ಮಳೆಯಾಗಬೇಕು. ಇಲ್ಲದಿದ್ದರೆ ಸಣ್ಣಪುಟ್ಟ ಮಳೆಗೆ ಹೊಲದಲ್ಲಿನ ರಂಟೆಗಳು ಕರಗುವುದಿಲ್ಲ ಎನ್ನುತ್ತಾರೆ ರೈತರು. ಒಣಬೇಸಾಯ ಅವಲಂಬಿಸಿದ ರೈತರು ಮುಂಗಾರು ಆರಂಭವಾಗುವ ಸಂದರ್ಭದಲ್ಲಿ ಹೊಲ ಹಸನುಗೊಳಿಸುವ ಕ್ರಿಯೆಯಲ್ಲಿ ಕೂಲಿ ಕಾರ್ಮಿಕರಿಗೆ ಅಲ್ಪಸ್ವಲ್ಪ ಕೆಲಸ ದೊರೆಯುತ್ತಿತ್ತು. ಆದರೆ ಈ ಬಾರಿ ಅದೂ ಇಲ್ಲದಂತಾಗಿದೆ.
ಗುಳೆ: ಹೀಗಾಗಿ ಒಣ ಬೇಸಾಯಿ ಅವಲಂಬಿಸಿದ ಗ್ರಾಮಗಳಲ್ಲಿನ ಕೃಷಿ ಕಾರ್ಮಿಕರು ಬೆಂಗಳೂರು, ಪೂನಾ, ಗೋವಾ, ಮಂಗಳೂರಿನಂತಹ ಮಹಾ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಗೋಮಾಳ, ತಗ್ಗುಪ್ರದೇಶ, ಕೆರೆ ದಂಡೆ ಏರಿ ಮೇಲೆ ಅಲ್ಪ ಸ್ವಲ್ಪ ಬೆಳೆದಿರುತ್ತಿದ್ದ ಸಣ್ಣಪುಟ್ಟ ಹುಲ್ಲು, ಮೇವು ಸಹ ಬಿಸಿಲಿನ ತಾಪಕ್ಕೆ ಒಣಗಿ ಹೋಗಿದ್ದು ಮೇವಿನ ಕೊರತೆ ಎದುರಾಗಿದೆ. ರೈತರು ದನಕರುಗಳನ್ನು ಮಾರುತ್ತಿದ್ದಾರೆ. ತಾಪಮಾನ ಕುಡಿಯುವ ನೀರಿನ ಸಮಸ್ಯೆ ತಂದೊಡ್ಡಿರುವುದಷ್ಟೇ ಅಲ್ಲ, ವ್ಯವಸಾಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.