'ಅಭಿವೃದ್ಧಿ ದಾಖಲೆಗೆ ಸೀಮಿತ ಬೇಡ'
ದೇವದುರ್ಗ: ತಾಲೂಕಿನ ಅಭಿವೃದ್ಧಿ ಕೇವಲ ದಾಖಲೆಗಳಿಗೆ ಸೀಮಿತವಾಗಬಾರದೆಂದು ಜಿಪಂ ಮಾಜಿ ಸದಸ್ಯ ಎ. ರಾಜಶೇಖರ ನಾಯಕ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಯಚೂರು ಹಾಗೂ ಎಸ್‌ಎಲ್‌ವಿ ಇನ್ಫೋಟೆಕ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ದೇವದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ತರಬೇತಿ ಯೋಜನೆಯಡಿ ಗಣಕ ಯಂತ್ರ ತರಬೇತಿ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯಾವಂತ ಯುವತಿಯರು ಉದ್ಯೋಗವಿಲ್ಲದೇ ತೊಂದರೆಯಲ್ಲಿದ್ದು ಅವರು ಗಣಕಯಂತ್ರ ತರಬೇತಿ ಪಡೆಯುವುದರಿಂದ ಸ್ವಯಂ ಉದ್ಯೋಗ ಕೈಗೊಳ್ಳಬಹುದು. ತರಬೇತಿ ಪಡೆದ ಯುವತಿಯರಿಗೆ ಉದ್ಯೋಗಿನಿ ಯೋಜನೆ ಅಡಿ ಸರ್ಕಾರದ ಸಾಲ ಸೌಲಭ್ಯ ದೊರಕಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಗೋಪಾಲ ನಾಯಕ್, ಸಕ್ಕೂಬಾಯಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ, ಶಿವಾನಂದ ಮೇಟಿ ವಕೀಲರು, ಕಾಂಗ್ರೆಸ್ ಯುವ ಮುಖಂಡ ಮಹ್ಮದ ಫಾರೂಖ್, ಚನ್ನಯ್ಯ ಸ್ವಾಮಿ ಹಿರೇಮಠ ಅರಕೇರಾ, ಗೋಗಿ ನಾಗರಾಜ, ಬಾಬಾ ಸಿಕ್ಕಲಗಾರ, ಸಂಸ್ಥೆಯ ಮುಖ್ಯಸ್ಥ ಗೋಪಿ ಮೇಟಿ, ಗೋಸಲ ಭೀಮಣ್ಣ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.