ಕಾಲೇಜು ಪ್ರವೇಶ ಶುಲ್ಕ ಬಹಿರಂಗಪಡಿಸಿ
ಸಿಂಧನೂರು: ಸಿಂಧನೂರು ತಾಲೂಕಿನ ಪದವಿಪೂರ್ವ ಕಾಲೇಜುಗಳು ಪಡೆಯುವ ಶುಲ್ಕ ಹಾಗೂ ಡೊನೇಷನ್ ಮೊತ್ತವನ್ನು ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.
ಕಾಲೇಜಿನ ಪ್ರಚಾರಕ್ಕಾಗಿ ಬಳಸುವ ಫ್ಲೆಕ್ಸ್, ಭಿತ್ತಿಪತ್ರ, ಕರಪತ್ರಗಳನ್ನು ಅನೇಕ ಕಾಲೇಜುಗಳು ಆಂಗ್ಲ ಭಾಷೆಯಲ್ಲಿ ಪ್ರಕಟಿಸುತ್ತಿವೆ. ದಿನಪತ್ರಿಕೆಗಳಲ್ಲಿ ಇಟ್ಟು ಕಳುಹಿಸುವ ಕರಪತ್ರಗಳು ಸಹ ಆಂಗ್ಲ ಭಾಷೆಯಲ್ಲಿ ಪ್ರಕಟಿಸುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರರು ಕಟ್ಟುನಿಟ್ಟಾದ ಆದೇಶ ಹೊರಡಿಸಿ ಕನ್ನಡದಲ್ಲಿಯೇ ಎಲ್ಲವನ್ನು ಪ್ರಕಟಿಸಬೇಕೆಂದು ಕರವೇ ತಾಲೂಕಾಧ್ಯಕ್ಷ ಎಚ್.ಗಂಗಣ್ಣ ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ಎಸ್. ದೇವೆಂದ್ರಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಚಪ್ಪ, ನಗರ ಘಟಕದ ಅಧ್ಯಕ್ಷ ದಾವಲಸಾಬ ದೊಡ್ಡಮನಿ, ಪದಾಧಿಕಾರಿಗಳಾದ ಮೌನೇಶ ಭಜಂತ್ರಿ, ಕಾಳಪ್ಪ ಮೇಸ್ತ್ರಿ, ರಾಮಕೃಷ್ಣ ಭಜಂತ್ರಿ, ವಿರುಪನಗೌಡ, ಶರಣೇಗೌಡ ಹೆಡಗಿನಾಳ ಪಾಲ್ಗೊಂಡಿದ್ದರು.