ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಲಪೂರ್ಣ 'ಬಿಲ್ಲಮರಾಜ'ನಿಗ್ಯಾಕಿಲ್ಲ ಅಭಿವೃದ್ಧಿ ಭಾಗ್ಯ?

Lingaraj Badiger
Updated On : 29 May 2013, 11:12 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 28
ಜಿಲ್ಲೆಯಲ್ಲಿ ಅತಿ ವಿಶಾಲವಾದ ಲಿಂಗಸ್ಗೂರು ಪಟ್ಟಣದ ಪುರಸಭೆ ವ್ಯಾಪ್ತಿಯ ಪುರಾತನ ಕೆರೆ ಅಭಿವೃದ್ಧಿ ಹೊಂದಿ ಸುಂದರ ತಾಣವಾಗಿ ಮಾರ್ಪಡುವುದೇ ಅಥವಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಪೊಳ್ಳು ಭರವಸೆಯಾಗಿ ಉಳಿವುದೇ ಎಂಬ ಪ್ರಶ್ನೆ ನಾಗರಿಕರಲ್ಲಿ ಕಾಡುತ್ತಿದೆ.
ಇತಿಹಾಸ: ಇತಿಹಾಸ ಪ್ರಸಿದ್ಧ ಈ ಕರೆಯನ್ನು ಕರಡಕಲ್ 800ನ್ನು ಆಳಿದ 3ನೇ ಬಿಲ್ಲಮನು (ಕ್ರಿ.ಶ.1025-1050) ನಿರ್ಮಿಸಿದ್ದು, ಹೈದ್ರಾಬಾದ್ ನಿಜಾಮರ ಹಾಗೂ ಬ್ರಿಟೀಷರ ಆಡಳಿತ ಅವಧಿಯಲ್ಲಿ ಲಿಂಗಸ್ಗೂರು ಜಿಲ್ಲಾ ಕೇಂದ್ರವನ್ನಾಗಿಸಿ ತಮ್ಮ ದಂಡಿನ ತಾಣವನ್ನಾಗಿ ಮಾಡಿ ವಿಹಾರಕ್ಕಾಗಿ ಕೆರೆಗೆ ಬರುತ್ತಿದ್ದರು. ಸೈನಿಕರಿಗೆ ಹಾಗೂ ಕುದುರೆಗಳಿಗೆ ನೀರು ಒದಗಿಸಲು ಉಪಯೋಗಿಸುತ್ತಿದ್ದರು. ಸಂಜೆ ಹೊತ್ತು ಕೆರೆಯ ಸುಂದರ ನೋಟವನ್ನು ಕಾಣಲು ಮತ್ತು ವಿಹರಿಸಲು ಕೆರೆಯ ದಡದಲ್ಲಿ ಎತ್ತರದಲ್ಲಿ ಮಹಲನ್ನು ನಿರ್ಮಿಸಲಾಗಿದೆ. ಈಗ ಅದು ಅಧಿಕಾರಿಗಳ ಕ್ಲಬ್‌ಗಾಗಿ ಬಳಲಾಗುತ್ತಿದೆ.
ಹಲವು ವರ್ಷಗಳ ಹಿಂದೆ ಮಳೆ ಅಭಾವದಿಂದ ಬರಗಾಲದ ಸಮಯದಲ್ಲಿ ಕೆರೆ ಸಂಪೂರ್ಣ ಬತ್ತಿಹೋಗಿತ್ತು. ಕೆರೆಯ ಮಧ್ಯಭಾಗದಲ್ಲಿ ರಸ್ತೆ ಮಾಡಿಕೊಂಡು ವಾಹನಗಳ ಸಂಚಾರಕ್ಕೆ ಉಪಯೋಗಿಸಲಾಗುತ್ತಿತ್ತು. ಈಗ ನಾರಾಯಣಪುರ ಜಲಾಶಯದ ರಾಂಪುರ ಏತನೀರಾವರಿ ಕಾಲುವೆಯಿಂದ ಹರಿಯುವ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಈ ಕೆರೆಗೆ ಬಿಡಲಾಗುತ್ತಿದ್ದರಿಂದ ನೀರಿನಿಂದ ತುಂಬಿ ಸುಂದರವಾಗಿ ಕಾಣುತ್ತಿದೆ ಮತ್ತು ಅಂತರ್ಜಲ ಹೆಚ್ಚಿಸಿದೆ.
ಅಭಿವೃದ್ಧಿಯತ್ತ ಗಮನವಿಲ್ಲ: ಕೆರೆಯ ದಂಡೆಯಲ್ಲಿ ಪೂರ್ವ ಭಾಗಕ್ಕೆ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ನಿರ್ಮಿಸಲಾಗಿದ್ದು, ಮೀನು ಸಾಕಾಣಿಕೆಯ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಇದರ ಸರಿಯಾದ ಬಳಕೆಯಿಲ್ಲದೆ ನಿರುಪಯುಕ್ತವಾಗಿ ಪಾಳು ಬಿದ್ದಿವೆ. ಮೀನು ಬೆಳೆಸಲು ಪ್ರತಿವರ್ಷ ಗುತ್ತಿಗೆ ಮೂಲಕ ಮೀನುಗಾರರು ಬಳಕೆ ಮಾಡುತ್ತಿರುವುದು ಬಿಟ್ಟರೆ ಈ ಕೆರೆಯ ಅಭಿವೃದ್ಧಿ ಕಡೆಗೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ.
ಬ್ರಿಟಿಷರ ಕಾಲದ ಕ್ಯಾಪ್ಟನ್ ಮನ್ ಎಂಬ ಅಧಿಕಾರಿ ಜಿಯೋಲಾಜಿಸ್ಟ್‌ನಲ್ಲಿ ಪರಿಣಿತರಾಗಿದ್ದರು. (ಇವರ ಸಮಾಧಿ ಲಿಂಗಸ್ಗೂರು ಪಟ್ಟಣದಲ್ಲಿದೆ.) ಈ ಅಧಿಕಾರಿಯ ಹೆಸರಿನಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಸಂಜಯ್ ಸಹಾಯ್ ಅವರು ಟೆನ್ನಿಸ್ ಟೂರ್ನಮೆಂಟ್ ನಡೆಸಿದ್ದರು. ಆದರೆ ಪ್ರಸಿದ್ಧ ಕೆರೆಯನ್ನು ಬಳಸಿಕೊಳ್ಳಲು ದೋಣಿ ವಿಹಾರ ಕೇಂದ್ರವನ್ನಾಗಿ ಮಾಡಲು ಉತ್ಸಾಹ ತೋರಿದ್ದ ಬೆನ್ನಲ್ಲೇ ವರ್ಗವಾಗಿ ಹೋದರು.
ಮೆಚ್ಚುಗೆ: ಅಲ್ಲದೆ ಈ ಹಿಂದೆ ಪ್ರಾದೇಶಿಕ ಆಯುಕ್ತರಾಗಿದ್ದ ರಜನೀಶ್ ಗೋಯಲ್, ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಅಮರನಾಥ ಪಾಟೀಲ್, ಗುಲ್ಬರ್ಗ ವಲಯ ಪೊಲೀಸ್ ಮಹಾನಿರೀಕ್ಷಕ ಕೆ.ವಿ. ಗಗನ್ ದೀಪ್, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಎಸ್ಪಿ ಶಶಿಕುಮಾರ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಗುಲ್ಬರ್ಗದ ಅಪ್ಪನ ಕೆರೆಯ ಮಾದರಿಯಲ್ಲಿ ನಿರ್ಮಿಸಿದರೆ ಪ್ರವಾಸಿಗರಿಗೆ ಅನುಕೂಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ ಕೆರೆ ಅಭಿವೃದ್ಧಿಗೆ ರು. 10 ಕೋಟಿ ವೆಚ್ಚದ ಅಂದಾಜು ಪತ್ರಿಕೆ ಸಿದ್ಧಪಡಿಸಿ ಸರ್ಕಾರದ ಮಂಜೂರಾತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲರು ಹೇಳುತ್ತಲೇ ಇದ್ದಾರೆ.
ಕಲುಷಿತ: ಅಂದು ಬಿಲ್ಲಮನ ಕಾಲದಲ್ಲಿ ಸಾವಿರಾರು ಜನರ ನೀರಿನ ದಾಹ ತೀರಿಸಿದ ಕರೆಯ ಈಗಿನ ಪರಿಸ್ಥಿತಿ ಗಮನಿಸಿದರೆ ನಿರ್ವಹಣೆ ಕೊರತೆಯಿಂದ ನೀರಿದ್ದರೂ ಬಳಲುತ್ತಿದೆ. ಕೆರೆಯಯಲ್ಲಿ ಕಸಕಡ್ಡಿ, ಕೋಳಿಪುಕ್ಕ, ಕೂದಲು ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯಲಾಗುತ್ತಿದೆ. ನಾಯಿ, ಹಂದಿ ಮತ್ತಿತರ ಪ್ರಾಣಿಗಳು ಸತ್ತರೆ ಕೆರೆಯಲ್ಲಿ ಹಾಕಲಾಗುತ್ತಿದೆ. ಇದರಿಂದ ಕೆರೆಯ ಸುಮುತ್ತಲ ಪ್ರದೇಶ ಕಲುಷಿತಗೊಳ್ಳುತ್ತದೆ. ಅಲ್ಲದೆ ಬೀದರ್-ಶ್ರೀರಂಗ ಪಟ್ಟಣ ರಾಜ್ಯ ಹೆದ್ದಾರಿ (19)ಗೆ ಹೊಂದಿಕೊಂಡಿರುವ ಕೆರೆಗೆ ತಡೆಗೋಡೆ ಇಲ್ಲದ ಪರಿಣಾಮ ವಾಹನಗಳು ನಿಯಂತ್ರಣ ತಪ್ಪಿ ಅಥವಾ ಅಪಘಾತಕ್ಕೀಡಾಗಿ ಕೆರೆಯಲ್ಲಿ ಇಳಿದ ಪ್ರಸಂಗಗಳು ಜರುಗಿವೆ.
ಮುಖ್ಯಾಧಿಕಾರಿ ಸ್ಪಷ್ಟನೆ: ಕರಡಕಲ್ ಕೆರೆ ಅಭಿವೃದ್ಧಿಗೆ ರು. 10 ಕೋಟಿ ಮಂಜೂರಾತಿಗೆ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಬಿಆರ್‌ಜಿಎಫ್ ಯೋಜನೆಯಡಿ ರು. 60 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ಬೋಟಿಂಗ್, ರು. 20 ಲಕ್ಷ ವೆಚ್ಚದಲ್ಲಿ ಸಾಮಾನ್ಯ ಹಾಗೂ ಮಕ್ಕಳ ಉದ್ಯಾನವನ ನಿರ್ಮಿಸಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ತಿಳಿಸಿದ್ಧಾರೆ.
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಜಿಲ್ಲೆಯ ಅತಿದೊಡ್ಡ ಕೆರೆ ಏನ್ನಿಸಿಕೊಂಡ ಬಿಲ್ಲಮರಾಜನ ಕರಡಕಲ್ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ರು. 10 ಕೋಟಿ ಮಂಜೂರಾತಿ ದೊರೆತು ಹಲವು ಗಣ್ಯರ ಕನಸಿನಂತೆ ಗುಲ್ಬರ್ಗದ ಅಪ್ಪನ ಕೆರೆಯಂತೆ ಅಭಿವೃದ್ಧಿಗೊಳ್ಳುವುದೇ ಅಥವಾ ಬಿಆರ್‌ಜಿಎಫ್ ಯೋಜನೆಯ ಹಣದಿಂದ ಕೈಗೊಂಡ ಅಭಿವೃದ್ಧಿ ಕೊನೆಯಾಗುವುದೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
-ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement