ಜಿಲ್ಲಾ ಆಸ್ಪತ್ರೆಗೆ ಶಾಸಕರ ಭೇಟಿ; ಅವ್ಯವಸ್ಥೆಗೆ ಬೇಸರ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 28
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ನಿರ್ವಹಿಸುತ್ತಿರುವ ನಗರದ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಶಾಸಕ ಡಾ. ಶಿವರಾಜ್ ಪಾಟೀಲ್ ಅವ್ಯವಸ್ಥೆ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದ ಅವರು ಅಲ್ಲಿನ ಅವ್ಯವಸ್ಥೆ, ಸ್ವಚ್ಛತೆಯ ಕೊರತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಸ್ವಚ್ಛತೆ ಕಾಯ್ದುಕೊಳ್ಳಲು ಸೂಚಿಸಿದರು.
ಸೌಲಭ್ಯ ಪರಿಶೀಲನೆ: ಅದೇ ರೀತಿ ಔಷಧದ ಕೊರತೆಯಿರುವುದು ಗಮನಕ್ಕೆ ಬಂದಿತು. ಶಿಶುಗಳ ಆರೈಕೆ ವಿಭಾಗಕ್ಕೆ ಭೇಟಿ ನೀಡಿದ ಶಾಸಕರಿಗೆ ಅಲ್ಲಿ ಕಳೆದ ಎರಡು ತಿಂಗಳಿನಿಂದ ಒಆರ್ಎಸ್ ಪುಡಿಯ ಕೊರತೆಯಿರುವುದು ಗೊತ್ತಾಯಿತು. ಇದರಿಂದ ತೀವ್ರ ಬೇಸರಗೊಂಡ ಅವರು, ಸರ್ಕಾರದಿಂದ ಒಆರ್ಎಸ್ ಪುಡಿಯನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಅದರ ದಾಸ್ತಾನಿರಿಸದಿರುವ ಬಗ್ಗೆ ಔಷಧ ವಿಭಾಗದ ಉಸ್ತುವಾರಿ ಹೊತ್ತ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರಿಗೆ ಇನ್ನೂ ವಿವಿಧ 50 ಔಷಧಗಳ ಕೊರತೆಯಿರುವುದು ಗಮನಕ್ಕೆ ಬಂದಿತು.
ಈ ವೇಳೆ ಅಧಿಕಾರಿಗಳಿಗೆ ಕೊರತೆಯಿರುವ ಔಷಧದ ಪಟ್ಟಿ ಸಿದ್ಧಪಡಿಸಿ ನೀಡಿದಲ್ಲಿ ಅಂಥ ಔಷಧಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು, ಆಸ್ಪತ್ರೆಯ ಹೆರಿಗೆ ವಿಭಾಗ, ತುರ್ತು ಚಿಕಿತ್ಸೆ ಘಟಕ, ಶಸ್ತ್ರಚಿಕಿತ್ಸೆ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಲಭ್ಯತೆಯ ಬಗ್ಗೆ ಪರಿಶೀಲಿಸಿದರು.
ಔಷಧಿ ಪೂರೈಕೆಗೆ ವ್ಯವಸ್ಥೆ: ಈ ಸಂದರ್ಭದಲ್ಲಿ ಅವರು ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರೆಯುತ್ತಿದೆಯೇ ಎಂದು ರೋಗಿಗಳಿಂದಲೇ ಕೇಳಿ ತಿಳಿದುಕೊಂಡರು. ರೋಗಿಗಳು ಶಾಸಕರಿಗೆ ನೀಡಿದ ದೂರುಗಳನ್ನು ಆಲಿಸಿ ಅವುಗಳನ್ನು ಸರಿಪಡಿಸುವಂತೆ ವೈದ್ಯಾಧಿಕಾರಿಗಳಿಗೆ ಆದೇಶಿಸಿದರು.
ಆಸ್ಪತ್ರೆಯಲ್ಲಿ ಔಷಧಿಗಳನ್ನು ರೋಗಿಗಳಿಗೆ ಹೊರಗಿನಿಂದ ತರಲು ಸೂಚಿಸಲಾಗುತ್ತಿದೆ. ದಾಸ್ತಾನು ಕೊರತೆಯಿದೆ ಎಂಬ ನೆಪವೊಡ್ಡಿ ಔಷಧಿ ಹೊರಗೆ ಖರೀದಿಸಲು ಹೇಳುತ್ತಿರುವ ಬಗ್ಗೆ ರೋಗಿಗಳು ಶಾಸಕರಿಗೆ ದೂರಿದರು. ಇದರಿಂದ ಸಿಡಿಮಿಡಿಗೊಂಡ ಅವರು, ಔಷಧಿಯನ್ನು ಉಚಿತವಾಗಿ ಪೂರೈಸುವ ವ್ಯವಸ್ಥೆ ಕೈಗೊಳ್ಳುವಂತೆ ಆದೇಶಿಸಿದರು.
ರಿಮ್ಸ್ ಸ್ಥಳಾಂತರಕ್ಕೆ ತುರ್ತು ಕ್ರಮ: ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ನೀಡಲಾಗುವ ಆಹಾರದ ಗುಣಮಟ್ಟದ ಪರಿಶೀಲನೆ ನಡೆಸಿದ ಶಾಸಕ ಡಾ. ಶಿವರಾಜ್ ಪಾಟೀಲ್, ಗುಣಮಟ್ಟದ ಆಹಾರ, ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಶಿಥಿಲಗೊಂಡಿರುವ ಕಟ್ಟಡದ ಕೊಠಡಿಗಳನ್ನು ಪರಿಶೀಲಿಸಿದ ಅವರು, ಕೂಡಲೇ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿ ಆಸ್ಪತ್ರೆಯನ್ನು ರಿಮ್ಸ್ನ ಕಟ್ಟಡಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಯುಸೂಫ್ ಖಾನ್, ಶಿವಶಂಕರ್, ಸುಭಾಷ್, ಯಲ್ಲಪ್ಪ, ಸೈಯದ್ ಮಾಸೂಮ್ ಸೇರಿದಂತೆ ಅನೇಕರಿದ್ದರು. ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.