ಭರವಸೆ ಈಡೇರಿಸುವೆ: ಶಾಸಕ
ಸಿಂಧನೂರು: ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಅವರು ತಾಲೂಕಿನ ಬಳಗಾನೂರು ಗ್ರಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಳಗಾನೂರು ಗ್ರಾಮದ ಹೊರ ವಲಯದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಬೃಹತ್ ಕೆರೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಇದ್ದು, ಯೋಜನೆಗೆ ಶೀಘ್ರ ಚುರುಕು ಮುಟ್ಟಿಸುವ ಮೂಲಕ ಜನರ ಬಹುದಿನದ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.
ಅಭಿವೃದ್ಧಿ ಕಾರ್ಯ: ಮಸ್ಕಿ, ಜವಳಗೇರ, ಬಳಗಾನೂರು ರಸ್ತೆ ಮೇಲ್ದರ್ಜೆಗೇರಿಸಲಾಗುವುದು. ಸಮರ್ಪಕ ವಿದ್ಯುತ್, ವಸತಿ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಕಾಳಜಿ ವಹಿಸಿ ಚುನಾವಣೆಯಲ್ಲಿ ಆಶ್ವಾಸನೆ ನೀಡಿದಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಗ್ರಾಮದ ಮುಖಂಡರು ಹಾಗೂ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ತಮಗೆ ಸಹಕರಿಸಬೇಕು. ವಿಶ್ವಾಸವಿಟ್ಟು ಎರಡನೇ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಚುನಾಯಿಸಿದ್ದು, ಯಾವುದೇ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಬಸವಂತರಾಯ ಕುರಿ, ಡಾ.ಬಿ.ಎಚ್. ದಿವಟರ್, ಶೇಖರಪ್ಪ ಮೇಟಿ, ವಿರುಪಣ್ಣ ಗುತ್ತೇದಾರ, ಗ್ರಾಪಂ ಉಪಾಧ್ಯಕ್ಷ ಎಚ್. ಮಹಾಬಳೇಶ್ವರ, ಎಪಿಎಂಸಿ ನಿರ್ದೇಶಕ ಶರಣೇಗೌಡ ಗಿಣಿವಾರ, ಮಾಜಿ ಅಧ್ಯಕ್ಷ ತಿಕ್ಕಯ್ಯ, ಯಂಕಪ್ಪ ನಾಯಕ, ಟಿ. ಅಮರೇಶ ನಾಯಕ, ಸದಸ್ಯರಾದ ನಾಗರಾಜ ಕೊಂಡರಡ್ಡಿ, ಗಣೇಶ ಡಿಶ್, ಮಹೆಬೂಬಪಾಷಾ ಅತ್ತಾರ ಮತ್ತಿತರರು ಪಾಲ್ಗೊಂಡಿದ್ದರು.