ಅಭದ್ರ ಸೇತುವೆ ಮೇಲೆ ಸುಭದ್ರ ರಸ್ತೆ ಅದೆಷ್ಟು ಸುರಕ್ಷಿತ?
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 29
ಇತ್ತೀಚೆಗೆ ಬೀದರ್- ಶ್ರೀರಂಗಪಟ್ಟಣ ಸೇರಿದಂತೆ ರಾಜ್ಯ ಹೆದ್ದಾರಿಗಳ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿರುವುದು ಸಂತಸದ ವಿಷಯ. ಆದರೆ ರಸ್ತೆಗಳ ಮಧ್ಯ ಇರುವ ಸೇತುವೆಗಳು ಅಭದ್ರತೆಯಿಂದ ಕೂಡಿದ್ದು, ಇದರಿಂದ ಸಂಚಾರ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ವಾಹನ ಚಾಲಕರು ಮತ್ತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಲಿಂಗಸ್ಗೂರು ಪಟ್ಟಣದಿಂದ ರಾಯಚೂರು, ಹೈದ್ರಾಬಾದ್, ಬಳ್ಳಾರಿ, ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಬೀದರ್, ಯಾದಗಿರಿ, ಹುಬ್ಬಳ್ಳಿ, ಧಾರವಾಡ, ಬಿಜಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಹೊಂದಿದೆ. ಪ್ರತಿನಿತ್ಯ ನೂರಾರು ಸಾರಿಗೆ ಬಸ್ಗಳು, ಲಘು ವಾಹನ ಮತ್ತು ಭಾರಿ ವಾಹನಗಳು ಸಂಚರಿಸುತ್ತವೆ.
ಶಿಥಿಲ ಸೇತುವೆ ಮೇಲೆ ರಸ್ತೆ ನಿರ್ಮಾಣ: ಕಳೆದ ಹಲವಾರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದ ರಸ್ತೆಗಳಿಗೆ ಇತ್ತೀಚೆಗೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಮತ್ತು ಕೆಲ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಆದರೆ ಹಳೆಯ ಹಾಗೂ ಶಿಥಿಲಾವಸ್ಥೆಗೆ ತಲುಪಿದ ಕೆಲ ಸೇತುವೆಗಳ ಮೇಲೆ ರಸ್ತೆ ನಿರ್ಮಿಸಿರುವುದು ಸಂಚಾರ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸುವುದು ಸಾಮಾನ್ಯ.
ಲಿಂಗಸ್ಗೂರು ಪಟ್ಟಣದಿಂದ ಮಸ್ಕಿ ಮಾರ್ಗ ಮಧ್ಯದ ಮುದಬಾಳ ಹಳ್ಳದ ಸೇತುವೆ, ಸಂತೆಕೆಲ್ಲೂರು ಬಳಿಯ ಗಡ್ಡಿ ಹಳ್ಳದ ಸೇತುವೆ, ಇದರ ಸಮೀಪದ ಹಳ್ಳದ ಸೇತುವೆಗಳು ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆಗೆ ತಲುಪಿ ರಸ್ತೆ ಅಕ್ಕಪಕ್ಕ ಭೋಂಗಾ(ಕುಸಿತ) ಬಿದ್ದಿವೆ.
ಸೇತುವೆ ಕುಸಿತ ಸಾಧ್ಯತೆ: ಅದರಂತೆ ಲಿಂಗಸ್ಗೂರು ಪಟ್ಟಣದ ಬಸ್ ನಿಲ್ದಾಣ ಬಳಿಯ ಸೇತುವೆ, ಯಲಗಲದಿನ್ನಿ ಹಳ್ಳದ ಸೇತುವೆ, ದೇವನಹಳ್ಳದ ಸೇತುವೆ, ಹೊನ್ನಳ್ಳಿ ಬಳಿಯ ಸೇತುವೆ ಹಾಗೂ ತಿಂಥಣಿ ಬ್ರಿಡ್ಜ್ ಮಾರ್ಗದ ಗುರುಗುಂಟಾ, ಗೋಲಪಲ್ಲಿ ಮತ್ತು ಮುದಗಲ್ ಮಾರ್ಗದ ರಸ್ತೆಗಳ ಮಧ್ಯದಲ್ಲಿ ಬರುವ ಸಣ್ಣಪುಟ್ಟ ಸೇತುವೆಗಳು ತುಂಬಾ ಹಳೆಯದಾಗಿವೆ. ಈ ಎಲ್ಲ ಸೇತುವೆಗಳ ಮೇಲೆ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕೈಗೊಳ್ಳಲಾಗಿದೆ. ರಸ್ತೆಗಳ ಮೇಲೆ ಭಾರಿ ವಾಹನಗಳ ಸಂಚಾರದಿಂದ ಕುಸಿತಗೊಳ್ಳುವ ಸಾಧ್ಯತೆಗಳಿವೆ ಎಂಬುದು ಸಾರ್ವಜನಿಕರು ಆತಂಕದಿಂದ ನುಡಿಯುತ್ತಾರೆ.
ಲೋಕೋಪಯೋಗಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸೇತುವೆಗಳ ಪರಿಶೀಲನೆ ನಡೆಸಿ ಕುಸಿತದ ಹಂತದಲ್ಲಿನ ಮತ್ತು ಶಿಥಿಲಾವಸ್ಥೆಗೆ ತಲುಪಿದ ಸೇತುವೆಗಳನ್ನು ಗುರುತಿಸಿ ನೂತನ ಸೇತುವೆಗಳ ನಿರ್ಮಾಣಕ್ಕೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯ.
-ಅಮರೇಶಸ್ವಾಮಿ ಬಲ್ಲಟಗಿ