ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಈ ವರ್ಷವೂ ಪಠ್ಯಪುಸ್ತಕ ಕೊರತೆ

Lingaraj Badiger
Updated On : 30 May 2013, 11:12 am

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 29
ಜಿಲ್ಲೆಯಲ್ಲಿ ಬೇಸಿಗೆಯ ರಜೆ ಮುಗಿದು ಶಾಲೆಗಳ ಪುನಾರಂಭಕ್ಕೆ ಸಕಲ ಸಿದ್ಧತೆ ಜಾರಿಯಲ್ಲಿದೆ. ಮಕ್ಕಳೂ ರಜೆಯ ಮಜಾ ಸವಿದು ಸಂಭ್ರಮದಿಂದ ಶಾಲೆಯತ್ತ ತೆರಳಲು ಸಜ್ಜಾಗಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಒದಗಿಸುವಲ್ಲಿ ಇದುವರೆಗೂ ಎಚ್ಚೆತ್ತಿಲ್ಲ. ಪರಿಣಾಮ ಶಾಲೆಗಳ ಆರಂಭದಲ್ಲಿಯೇ ಪಠ್ಯಪುಸ್ತಕಗಳ ಕೊರತೆಯ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ.
ನಗರ ಸೇರಿದಂತೆ ಜಿಲ್ಲಾದ್ಯಂತ ಮೇ 31ರಂದು ಶಾಲೆಗಳು ಪುನಾರಂಭಗೊಳ್ಳಲಿವೆ. ರಾಜ್ಯ ಸರ್ಕಾರ ಈಗಾಗಲೇ ಮೇ 30ರಂದೇ ಶಾಲೆಗಳ ಪುನಾರಂಭಕ್ಕೆ ಸಂಬಂಧಿಸಿ ಅಲ್ಲಿನ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದೆ. ಆದರೆ ಆರಂಭದಲ್ಲಿಯೇ ಶಿಕ್ಷಕರಿಗೆ ವಿಘ್ನಗಳು ಎದುರಾಗಿದ್ದು, ಪ್ರತಿ ವರ್ಷದಂತೆ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಕೊರತೆಯಾಗುವ ಲಕ್ಷಣಗಳಿವೆ.
6,27,761 ಪಠ್ಯಪುಸ್ತಕಗಳ ಕೊರತೆ: ಜಿಲ್ಲೆಯಲ್ಲಿ ಸದ್ಯದ ಮಾಹಿತಿಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿವಿಧ ವಿಷಯಗಳ ಒಟ್ಟು 6,27,761 ಪಠ್ಯಪುಸ್ತಕಗಳ ಕೊರತೆಯಿದೆ. ಜಿಲ್ಲೆಯ ಐದು ತಾಲೂಕುಗಳಿಗೆ ಒಟ್ಟು 17,04,812 ಪಠ್ಯಪುಸ್ತಕಗಳ ಅವಶ್ಯಕತೆಯಿದ್ದು, ಆ ಪೈಕಿ ಸರ್ಕಾರದಿಂದ ಇದುವರೆಗೆ 10,77,051 ಪಠ್ಯ ಪುಸ್ತಕಗಳನ್ನು ಮಾತ್ರ ಪೂರೈಸಿದೆ.
ಉಚಿತ ಪುಸ್ತಕಗಳ ಬೇಡಿಕೆಯು ಜಿಲ್ಲೆಯಲ್ಲಿ 13,23,042 ಆಗಿದೆ. ಆದರೆ ಸರ್ಕಾರದಿಂದ 8,05,883 ಉಚಿತ ಪುಸ್ತಕಗಳ ಪೂರೈಕೆಯಾಗಿದೆ. ಅದೇ ರೀತಿ ಪುಸ್ತಕಗಳ ಮಾರಾಟಕ್ಕೆ 3,81,770 ಪುಸ್ತಕಗಳಿಗೆ ಬೇಡಿಕೆಯಿದ್ದು, 2,71,168 ಪುಸ್ತಕಗಳನ್ನು ಒದಗಿಸಲಾಗಿದೆ.
ಶಾಲೆಗಳ ಆರಂಭಕ್ಕೆ ಒಂದೇ ದಿನ ಬಾಕಿ: ಸದ್ಯದ ಮಾಹಿತಿಯಂತೆ ಜಿಲ್ಲೆಗೆ ಸರ್ಕಾರದಿಂದ 5,17,159 ಉಚಿತ ಹಾಗೂ 1,10,602 ಮಾರಾಟದ ಪುಸ್ತಕಗಳು ದೊರೆಯಬೇಕಿದೆ. ಶೈಕ್ಷಣಿಕ ವರ್ಷಕ್ಕಾಗಿ ಶಾಲೆಗಳ ಪುನಾರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿಯಿರುವಾಗಲೇ ಪುಸ್ತಕಗಳ ಕೊರತೆ ಎದುರಾಗಿರುವುದು ಶಿಕ್ಷಕರಲ್ಲಿ ಆತಂಕ ತಂದಿದೆ.
ಜಿಲ್ಲೆಯಲ್ಲಿ ಸದ್ಯ 2ನೇ ತರಗತಿಯ ಪರಿಸರ ಅಧ್ಯಯನ, 3ನೇ ತರಗತಿಯ ಕನ್ನಡ ಮತ್ತು, ಪರಿಸರ ಅಧ್ಯಯನ, 4ನೇ ತರಗತಿಯ ಇಂಗ್ಲಿಷ್, 6ನೇ ತರಗತಿಯ ಕನ್ನಡ, ಇಂಗ್ಲಿಷ್, 9ನೇ ತರಗತಿಯ ಸಾಮಾಜಿಕ ಅಧ್ಯಯನ, ಗಣಿತ, ವಿಜ್ಞಾನ ವಿಷಯಗಳ ಪುಸ್ತಕಗಳ ಕೊರತೆಯಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.
ಪ್ರತಿ ವರ್ಷ ಇದೇ ಗೋಳು: ಸರ್ಕಾರ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಪೂರೈಕೆ ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಎಡವುತ್ತಿದೆ. ಶಾಲೆಗಳ ಆರಂಭದಲ್ಲಿಯೇ ಪುಸ್ತಕಗಳ ಕೊರತೆ ಎದುರಾದರೆ ಈ ಸಮಸ್ಯೆ ಮುಂದಿನ ಒಂದು ತಿಂಗಳವರೆಗೆ ಹಾಗೆಯೇ ಮುಂದುವರಿಯುತ್ತದೆ ಎಂಬುದು ಶಿಕ್ಷಕರ ಆತಂಕದ ಮಾತು.
ಕಳೆದ ಕೆಲ ವರ್ಷಗಳಿಂದ ಈ ಸಮಸ್ಯೆ ಶಾಲೆಗಳ ಆರಂಭದಲ್ಲಿ ಕಾಡುತ್ತದೆ. ಅಂಥ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ಬಳಸಿದ ಪುಸ್ತಕಗಳನ್ನು ಮಕ್ಕಳಿಗೆ ನೀಡಿ ಬೋಧನೆ ಮಾಡುವಂಥ ಅನಿವಾರ್ಯತೆ ಶಿಕ್ಷಕರದ್ದಾಗಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವೂ ಹೌದು.
ಶಿಕ್ಷಕರಲ್ಲಿ ಆತಂಕ: ಒಂದೆಡೆ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತೊಂದು ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಪುನಾರಂಭಕ್ಕೆ ಸಜ್ಜಾಗಿದ್ದಾರೆ. ಆದರೆ ಇನ್ನೊಂದೆಡೆ ಪುಸ್ತಕಗಳ ಕೊರತೆಯ ಮಧ್ಯೆಯೇ ವಿದ್ಯಾರ್ಥಿಗಳು ಶಾಲೆಗೆ ತೆರಳುವಂಥ ಸ್ಥಿತಿಯಿದೆ. ಮುಂದಿನ ಒಂದೆರಡು ದಿನಗಳಲ್ಲಿ ಪುಸ್ತಕಗಳು ಲಭ್ಯವಾಗಲಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಶಿಕ್ಷಕರಿಗೆ ಮಾತ್ರ ಆತಂಕ ಮರೆಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement